ಡಿಕೆಶಿ ಕಟ್ಟಿಹಾಕಲು ಸಿದ್ದರಾಮಯ್ಯ ಡಿಸಿಎಂ ಪ್ರಯೋಗ: ಆರ್.ಅಶೋಕ್

| Published : Jan 07 2024, 01:30 AM IST

ಸಾರಾಂಶ

ಡಿಕೆ ಶಿವಕುಮಾರ್‌ ಅವರ ಬಲವನ್ನು ಕುಂದಿಸಲು ಸಿದ್ದರಾಮಯ್ಯ ಅವರು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ಚಿತಾವಣೆ ನಡೆಸಿದ್ದಾರೆಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಸರ್ಕಾರದಲ್ಲಿ 3 ಡಿಸಿಎಂ ಹುದ್ದೆಗಳನ್ನು ರಚಿಸಬೇಕು ಎನ್ನುವ ಕೂಗು ಎದ್ದಿರುವುದಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ಚಿತಾವಣೆ ಎಂದು ವಿಪಕ್ಷ ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಬಲವನ್ನು ಕುಂದಿಸಲಿಕ್ಕೆ ಇನ್ನೂ 3 ಡಿಸಿಎಂ ಹುದ್ದೆಗಳ ಪ್ರಯೋಗ ಆಗುತ್ತಿದೆ. ನಾಳೆ ಡಿಕೆಶಿ ಅವರಿಗೆ ನ್ಯಾಯಾಲಯದಲ್ಲಿಯೂ ಹಿನ್ನಡೆಯಾದರೆ ಅವರ ಪಕ್ಷವೇ ಅದಕ್ಕೆ ಕಾರಣ, ಡಿಕೆಶಿಗೆ ಏನಾದರೂ ಕಂಟಕಗಳಿದ್ದರೆ ಅದು ಕಾಂಗ್ರೆಸ್‌ನಿಂದಲೇ ಹೊರತು ಬಿಜೆಪಿಯಿಂದಲ್ಲ. ಯಾಕೆಂದರೆ ಡಿಕೆಶಿಯನ್ನು ಕಟ್ಟಿ ಹಾಕಿದ್ರೆ ನೇರವಾಗಿ ಸಿದ್ದರಾಮಯ್ಯರಿಗೆ ಲಾಭ, ಅವರೇ ಮುಂದಿನ ಎರಡೂವರೆ ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಈ ಚಿತಾವಣೆ ಮಾಡುತ್ತಿದ್ದಾರೆ ಎಂದು ಅಶೋಕ್ ವಿಶ್ಲೇಷಿಸಿದರು.

ರಾಜ್ಯದಲ್ಲಿ ಬಿಜೆಪಿಯ ಧ್ವನಿ ಗಟ್ಟಿಯಾಗಿದೆ, ಅದಕ್ಕೆ ಸ್ವತಃ ಮುಖ್ಯಮಂತ್ರಿ, ಗೃಹ ಸಚಿವರೇ ಬಿಜೆಪಿಯ ಒಬ್ಬ ಸಾಮಾನ್ಯ ಕರಸೇವಕನ ಬಗ್ಗೆ ಮಾತನಾಡುತ್ತಿದ್ದಾರೆ. ಖರ್ಗೆ ಅವರೂ ಪ್ರತಿಕ್ರಿಯಿಸಿದ್ದಾರೆ, ಅಂದ್ರೆ ವಿರೋಧ ಪಕ್ಷದ ಧ್ವನಿ ಗಟ್ಟಿಯಾಗಿದೆ, ಆಡಳಿತ ಪಕ್ಷಕ್ಕೆ ನಡುಕ ಶುರುವಾಗಿದೆ ಎಂದವರು ಹೇಳಿದರು.

ಸೋಮಣ್ಣ ಅವರ ಕೆಲವು ಬೇಡಿಕೆಗಳಿವೆ, ಅವರೊಂದಿಗೆ, ಅವರ ಮಗನೊಂದಿಗೆ ಮಾತನಾಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಅವುಗಳನ್ನು ಚರ್ಚಿಸಲಾಗುತ್ತದೆ. ಯತ್ನಾಳ್ ಅವರ ಬಗ್ಗೆಯೂ ಮಾತನಾಡದಂತೆ ತಾಕೀತು ಮಾಡಿದ್ದು, ಪಕ್ಷದಲ್ಲಿ ಈ ತರದ ಬೆಳವಣಿಗೆಗಳು ಸರ್ವೇಸಾಮಾನ್ಯ, ಎಲ್ಲವೂ ಸರಿ ಹೋಗುತ್ತದೆ ಎಂದವರು ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂದು 2 ಸರ್ವೆಗಳಾಗಿವೆ, ಅದರಲ್ಲಿ ಯಾರೂ ಜನರ ಹತ್ತಿರ ಇದ್ದಾರೆ ಅವರಿಗೆ ಟಿಕೆಟ್ ಸಿಗುತ್ತದೆ. ಜೆಡಿಎಸ್ ಜೊತೆ ಇನ್ನೂ ಸೀಟು ಹೊಂದಾಣಿಕೆಯ ಚರ್ಚೆ ಆಗಿಲ್ಲ, ಈ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯ ಜೊತೆ ನಮ್ಮ ಕೇಂದ್ರ ನಾಯಕರು ಮಾತನಾಡುತ್ತಾರೆ. ನಾವು ಯಾವ ಸ್ಥಾನಕ್ಕೂ ಪಟ್ಟು ಹಿಡಿಯೋದಿಲ್ಲ ಎಂದು ಜೆಡಿಎಸ್ ಹೇಳಿದೆ, ಇದು ಬಿಜೆಪಿಗೆ ಒಳ್ಳೆಯ ಸುದ್ದಿ ಎಂದು ಅಶೋಕ್ ಹೇಳಿದರು.