ಇದು ಸಂಭ್ರಮಾಚರಣೆಯಲ್ಲ, ಬದಲಿಗೆ ಸಾವಿರ ದಿನಗಳಲ್ಲಿ ಸಾವಿರ ಆವಾಂತರಗಳನ್ನು ಸೃಷ್ಟಿಸಿದ ಕುಖ್ಯಾತಿಯ ಸಮಾವೇಶವಾಗಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಸಾವಿರ ದಿನ ಪೂರೈಸಿರುವ ನೆಪದಲ್ಲಿ ಹಮ್ಮಿಕೊಂಡಿರುವ ಸಮಾವೇಶ ವಿಚಿತ್ರವಾಗಿದೆ. ಇದು ಸಂಭ್ರಮಾಚರಣೆಯಲ್ಲ, ಬದಲಿಗೆ ಸಾವಿರ ದಿನಗಳಲ್ಲಿ ಸಾವಿರ ಆವಾಂತರಗಳನ್ನು ಸೃಷ್ಟಿಸಿದ ಕುಖ್ಯಾತಿಯ ಸಮಾವೇಶವಾಗಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸೈಟ್ ವಾಪಸ್ ಕೊಟ್ಟಿದ್ದೇ ತಪ್ಪೊಪ್ಪಿಗೆಯಾಗಿದೆ. ₹178 ಕೋಟಿ ವಾಲ್ಮೀಕಿ ಹಗರಣದಲ್ಲಿ ₹90 ಕೋಟಿ ದುರ್ಬಳಕೆಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ.ವಕ್ಫ್ ಮಂಡಳಿಯಲ್ಲಿ 4 ಕೋಟಿ ಹಾಗೂ 9 ವಿವಿಧ ನಿಗಮಗಳಲ್ಲಿ ₹42 ಕೋಟಿಗಳ ಹಣ ದುರ್ಬಳಕೆಯಾಗಿದೆ. ಅಬಕಾರಿ ಇಲಾಖೆಯಲ್ಲಿ ಮಧ್ಯವರ್ತಿಗಳಿಂದ ₹700 ಕೋಟಿ ವಸೂಲಿ ಮಾಡಲಾಗುತ್ತಿದೆ. ಅಧಿಕಾರಿಗಳು ಅರೆಸ್ಟ್ ಆದರೂ ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಮೇಲೆ ಶೇ. 40 ಕಮಿಷನ್ ಆರೋಪ ಹೊರಿಸಿದ್ದ ಕಾಂಗ್ರೆಸ್, ಇಂದು ಶೇ. 63 ಕಮಿಷನ್ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದೆ. ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರೂ ಕಮಿಷನ್ ಹಾವಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 2,422 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಇದರ ಬಗ್ಗೆ ಕಾಂಗ್ರೆಸ್‌ನಲ್ಲಿ ಇದ್ದವರೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.ಸಿಎಂ ತವರು ಜಿಲ್ಲೆಯಲ್ಲೇ ಡ್ರಗ್ ಫ್ಯಾಕ್ಟರಿ ಪತ್ತೆಯಾಗಿದೆ. ಇದನ್ನು ಪತ್ತೆ ಹಚ್ಚಿದ್ದು ನಮ್ಮ ಪೊಲೀಸರಲ್ಲ, ಮಹಾರಾಷ್ಟ್ರ ಪೊಲೀಸರು ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ₹13 ಸಾವಿರ ಸ್ಮಾರ್ಟ್ ಮೀಟರ್ ಹಾಗೂ ಬೆಂಗಳೂರಿನ ಕಸದ ಮಷೀನ್‌ಗೆ ₹617 ಕೋಟಿ ವ್ಯಯಿಸಿರುವುದು ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದರು.ಭಿನ್ನಮತ ಮಾರಕ
ಹಾವೇರಿ ಸಮಾವೇಶದಲ್ಲಿ ಸಿಎಂ ಮತ್ತು ಡಿಸಿಎಂ ಪರಸ್ಪರ ಮುಖ ನೋಡಿಕೊಳ್ಳುತ್ತಿಲ್ಲ. ಸಿಎಂ ಭಾಷಣ ಶುರುವಾಗುತ್ತಿದ್ದಂತೆಯೇ ಡಿಸಿಎಂ ವೇದಿಕೆ ಬಿಟ್ಟು ಹೋಗಿದ್ದಾರೆ. ಅವರ ನಡುವಿನ ಭಿನ್ನಮತ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿರುವ ಈ ಸರ್ಕಾರಕ್ಕೆ ಸಂಭ್ರಮಿಸಲು ಯಾವುದೇ ನೈತಿಕತೆ ಇಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.