ಶಿಗ್ಗಾಂವಿಗೆ ಸಿದ್ದರಾಮಯ್ಯ ಏನೂ‌ ಕೊಟ್ಟಿಲ್ಲ: ಶಾಸಕ ಪಾಟೀಲ್ ಟೀಕೆ

| Published : Nov 11 2024, 12:45 AM IST

ಸಾರಾಂಶ

ಸಿದ್ದರಾಮಯ್ಯ ಶಿಗ್ಗಾಂವಿಗೆ ಬಂದು ಇಲ್ಲಿ ಏನು ಕೊಟ್ಟಿದ್ದಾರೆ ಎಂದು ಹೇಳಬೇಕು‌, ಅದನ್ನು ಬಿಟ್ಟು ನುಡಿದಂತೆ ನಡೆದಿದ್ದೇವೆ ಎಂದು ಹೇಳುವುದೆಲ್ಲ ಬರೀ ಮಾತಷ್ಟೇ ಎಂದು ಬಿಜೆಪಿ ಮುಖಂಡ, ಶಾಸಕ ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಹಾವೇರಿ (ಶಿಗ್ಗಾಂವಿ): ಸಿದ್ದರಾಮಯ್ಯ ಶಿಗ್ಗಾಂವಿಗೆ ಬಂದು ಇಲ್ಲಿ ಏನು ಕೊಟ್ಟಿದ್ದಾರೆ ಎಂದು ಹೇಳಬೇಕು‌, ಅದನ್ನು ಬಿಟ್ಟು ನುಡಿದಂತೆ ನಡೆದಿದ್ದೇವೆ ಎಂದು ಹೇಳುವುದೆಲ್ಲ ಬರೀ ಮಾತಷ್ಟೇ ಎಂದು ಬಿಜೆಪಿ ಮುಖಂಡ, ಶಾಸಕ ಸಿ.ಸಿ. ಪಾಟೀಲ್ ಹೇಳಿದ್ದಾರೆ.ಬಿಜೆಪಿ ವತಿಯಿಂದ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಪರ ಪ್ರಚಾರ ನಡೆಸಿ ಬಳಿಕ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

2008ರಲ್ಲಿ ಶಿಗ್ಗಾಂವಿ ಸವಣೂರಿಗೆ ಬೊಮ್ಮಾಯಿ ಬಂದರು‌. ಇಲ್ಲಿ ಐದು ಲಕ್ಷದ ಮನೆ, ವರದಾ ನದಿಯಿಂದ ಕುಡಿಯುವ ನೀರು ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಜಮೀರ್ ಅಹಮದ್ 2025ರ ವರೆಗೆ ಮನೆ‌ ಇಲ್ಲ ಅಂತ ಹೇಳಿದ್ದಾರೆ. ಆದರೆ ಇಲ್ಲಿ ಬೊಮ್ಮಾಯಿ ಅವರು ಐದು ಲಕ್ಷ ರು.ಗಳ 15000 ಸಾವಿರ ಮನೆ ಕಟ್ಟಿಸಿದ್ದಾರೆ‌ ಎಂದರು.

ಕೋವಿಡ್ ಹಗರಣದ ಬಗ್ಗೆ ಮಾತನಾಡುತ್ತಾರೆ. ಜಸ್ಟಿಸ್ ಕುನ್ಹಾ ಅವರು ಯಾವ ರೀತಿಯ ವರದಿ ನೀಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಅವರು ಸಿಎಂ ಇರಲಿಲ್ಲ ಅಂದರೆ ರಸ್ತೆಯಲ್ಲಿ ಹೆಣ ಬೀಳುತ್ತಿದ್ದವು‌. ಸಿದ್ದರಾಮಯ್ಯ ಅವರು ಸಿಎಂ ಆಗಿ ಶಿಗ್ಗಾಂವಿ ಸವಣೂರಿಗೆ ಏನು ಕೊಡುಗೆ ಕೊಟ್ಟಿದ್ದೀರಿ, ಮುಂದಿನ ಮೂರು ವರ್ಷ ಏನು ಕೊಡುತ್ತೀರಿ? ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಎಲ್ಲ ಯೋಜನೆಗಳನ್ನು ಮುಂದುವರೆಸುತ್ತ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದರು. ಈ ಸರ್ಕಾರ ಬಂದು ಅದನ್ನು ನಿಲ್ಲಿಸಿದೆ. ಸಿದ್ದರಾಮಯ್ಯ ಅವರು ನಮ್ಮ ಅವಧಿಯ ಎಷ್ಟು ಯೋಜ‌ನೆಗಳನ್ನು ನಿಲ್ಲಿಸಿ ಹಣ ಉಳಿಸಿದ್ದೀರಿ ಎಂದು ಪಟ್ಟಿ ಕೊಡಿ, ಮಾತೆತ್ತಿದರೆ ಕೇಸ್‌ ಹಾಕುತ್ತೀರಿ, ಎಷ್ಟು ಜನರ ಮೇಲೆ ಕೇಸ್ ಹಾಕುತ್ತೀರಿ, ಪೊಲೀಸ್ ಸ್ಟೇಷನ್‌ಗೆ ದಾಳಿ ಮಾಡಿದವರನ್ನು ಬಿಡುಗಡೆ ಮಾಡಿದ್ದೀರಿ, ತುಷ್ಟೀಕರಣ ರಾಜಕಾರಣ ಮಾಡುತ್ತೀದ್ದೀರಿ, ವಾಲ್ಮೀಕಿ ನಿಗಮದಲ್ಲಿ ₹87 ಕೋಟಿ ಹಗರಣ ಆಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದೀರಿ, ರಾಜಿನಾಮೆ ಕೊಡಬೇಕಿತ್ತು. ಆದರೆ, ಭಂಡತನ ತೋರಿಸುತ್ತೀರಿ ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪಿಪಿಇ‌ ಕಿಟ್ ಖರೀದಿಸಿ ಜನರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ನೀವು ಮನೆಯ ಮುಂದೆ ಯಾರೂ ಮನೆಗೆ ಬರಬೇಡಿ ಎಂದು ಬೋರ್ಡ್ ಹಾಕಿದ್ದೀರಿ. ಭರತ್ ಬೊಮ್ಮಾಯಿ ಒಬ್ಬ ಯುವಕ ಇದ್ದಾನೆ‌. ಅವನು ಶಿಗ್ಗಾಂವಿಯಲ್ಲಿ ಫ್ಯಾಕ್ಟರಿ ತಂದಿದ್ದಾನೆ‌. ಇನ್ನು ಅನೇಕ ಅಭಿವೃದ್ಧಿ ಕಾರ್ಯ ಮಾಡಲಿದ್ದಾನೆ. ಅವನಿಗೆ ಮತನೀಡಿ ಗೆಲ್ಲಿಸುವಂತೆ ಸಿ.ಸಿ. ಪಾಟೀಲ್ ಮನವಿ ಮಾಡಿದರು.