ಸಾರಾಂಶ
ರಾಣಿಬೆನ್ನೂರು : ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ ಬಂದಿಲ್ಲ. ಅದಕ್ಕಿಂತ ಮುಂಚೆಯೂ ಅವರಿಗೆ ಜನ ಬೆಂಬಲವಿದೆ ಎಂದು ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ದೇಶ ಪ್ರೇಮಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣ ಹಾಗೂ ಶ್ರೀ ಕನಕ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಯಾವ ವ್ಯಕ್ತಿಯೂ ಹಸಿವಿನಿಂದ ಇರಬಾರದು ಎಂಬ ಚಿಂತನೆಯಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗ ಪಂಚ ಗ್ಯಾರಂಟಿ ಯೋಜನೆ ಜಾರಿ ಮೂಲಕ ಒಂದು ಲಕ್ಷ ಕೋಟಿ ಕುಟುಂಬಗಳಿಗೆ ಆರ್ಥಿಕ ಬಲ ತುಂಬಿದರು. ದೇವರಗುಡ್ಡ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಇಲಾಖೆ ವತಿಯಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ದೇವರಗುಡ್ಡ ರಾಜ್ಯದಲ್ಲಿಯೇ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದ್ದು ಇಲ್ಲಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಸಿದ್ದರಾಮಯ್ಯ 2013ರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ 20ಕ್ಕೂ ಹೆಚ್ಚು ಕೋಟಿ ನೀಡಿದ್ದರು. ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಾ ನಿವಾಸ ಹಾಗೂ ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ನರಸೀಪುರ ಅಂಬಿಗರ ಚೌಡಯ್ಯಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ‍್ಯ ಚಳವಳಿಯಲ್ಲಿ ಸಂಗೊಳ್ಳಿ ರಾಯಣ್ಣ ದೊಡ್ಡ ಕ್ರಾಂತಿ ಮಾಡಿದ್ದರು.
ನಾಡಿನ ಎಲ್ಲಾ ಹಿಂದುಳಿದ ವರ್ಗದ ಜನರನ್ನು ಮೇಲಕ್ಕೆ ಎತ್ತುವ ಶಕ್ತಿ ಇರುವುದು ಸಿದ್ದರಾಮಯ್ಯನವರಿಗೆ ಇದೆ. ಅವರಿಗೆ ಇವತ್ತು ಬಂದಿರುವ ಕಷ್ಟ ಬಗೆಹರಿಸಲು ಆ ದೇವರು ಶಕ್ತಿ ನೀಡುವಂತಾಗಲಿ ಎಂದರು.
ತಿಂಥಣಿ ಕನಕ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಸುಮಾರು 2700 ವರ್ಷಗಳ ಇತಿಹಾಸ ಹೊಂದಿರುವ ದೇವರಗುಡ್ಡ ಒಂದು ಜಾತ್ಯತೀತ ಕ್ಷೇತ್ರವಾಗಿದೆ. ಗೊರವಯ್ಯ ಎಂದರೆ ಗುರು ಪರಂಪರೆಯಾಗಿದ್ದು, ಸತ್ಯ, ಶಕ್ತಿ, ನಿಷ್ಠೆಯ ಪ್ರತೀಕ. ಆದರೆ ಇಂತಹ ಗೊರವಯ್ಯನವರನ್ನು ಯಾದಗಿರಿ ಜಿಲ್ಲೆಯಲ್ಲಿ ಭಿಕ್ಷುಕರಂದು ಭಾವಿಸಿ ಪೊಲೀಸರು ಜೈಲಿಗೆ ಅಟ್ಟಿದ್ದರು.
ಈ ನಿಟ್ಟಿನಲ್ಲಿ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಯಾದಗಿರಿ, ಬೀದರ, ದೇವರಗುಡ್ಡ, ಮಲೆ ಮಹದೇಶ್ವರ ಬೆಟ್ಟ ಜಾತ್ಯತೀತ ಕ್ಷೇತ್ರಗಳಾಗಿದ್ದು, ಇವುಗಳ ಅಭಿವೃದ್ಧಿಯಾದಲ್ಲಿ ಸಾಮಾಜಿಕ ನ್ಯಾಯ ಸಿಗುತ್ತದೆ. ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಪರಿಪಾಲನೆ ಹಾಗೂ ಪರಿಶುದ್ಧ ಜೀವನದಿಂದ ರಾಜಕಾರಣ ಮಾಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರುಗಳಾದ ಪ್ರಕಾಶ ಕೋಳಿವಾಡ, ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ಅಜ್ಜಂಪೀರ ಖಾದ್ರಿ, ನೆಹರು ಓಲೇಕಾರ, ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್. ಶಂಕರ್, ಮಾಜಿ ಸಂಸದ ಐ.ಜಿ. ಸನದಿ, ಆನಂದಸ್ವಾಮಿ ಗಡ್ಡದೇವರಮಠ, ದೇವರಗುಡ್ಡದ ಕಾರ್ಣಿಕದ ಸ್ವಾಮೀಜಿ ನಾಗಪ್ಪಜ್ಜ ಉರ್ಮಿ, ಬೀರಲಿಂಗೇಶ್ವರ ಪೂಜಾರರು ಕರಿಯಪ್ಪಜ್ಜ ಹಕಾರಿ, ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಸತಗಿ ಮತ್ತಿತರರಿದ್ದರು.