ಸಿದ್ದರಾಮಯ್ಯ ಸದಾ ನನ್ನೊಂದಿಗೆ ಇರುತ್ತಾರೆ. ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು- ಕರೆದು ಅಧಿಕಾರ ಪಡೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವಾಗ ಸಿಗುವ ನಿರೀಕ್ಷೆ ಇದೆ. ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇನೆ.
ಕನ್ನಡಪ್ರಭ ವಾರ್ತೆ ಮೈಸೂರು
ಅಧಿಕಾರಕ್ಕಾಗಿ ನಾನು ಯಾರ ಮುಂದೆಯೂ ಅತ್ತು ಕರೆದಿಲ್ಲ. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸದಾ ನನ್ನೊಂದಿಗೆ ಇರುತ್ತಾರೆ. ಮಂತ್ರಿಗಿರಿ, ಅಧಿಕಾರಕ್ಕಾಗಿ ಎಂದಿಗೂ ಯಾರನ್ನು ಕೇಳಿಕೊಂಡಿಲ್ಲ. ಅತ್ತು- ಕರೆದು ಅಧಿಕಾರ ಪಡೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವಾಗ ಸಿಗುವ ನಿರೀಕ್ಷೆ ಇದೆ. ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇನೆ ಎಂದರು.
ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲದಿದ್ದಕ್ಕೆ ನಿರಾಶೆಯಾಗುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ನಮ್ಮ ಪರವಾಗಿಲ್ಲ ಎಂದು ಹೇಳಬಾರದು. ನನ್ನ ಪರವಾಗಿ ಬಲವಾಗಿ ವಾದ ಮಾಡಿಲ್ಲ ಎನ್ನುವುದು ಸರಿಯಲ್ಲ. ಡಾ. ಯತೀಂದ್ರ ಕೂಡ ನಮ್ಮ ಮಗನಿದ್ದಂತೆ. ನಾನು- ಸಿದ್ದರಾಮಯ್ಯ 40 ವರ್ಷಗಳ ಕಾಲ ಜತೆಯಾಗಿದ್ದಂತೆ ಡಾ. ಯತೀಂದ್ರ ಹಾಗೂ ಸುನಿಲ್ ಬೋಸ್ ಜತೆಯಾಗಿದ್ದಾರೆ. ನನ್ನ ಸಿದ್ಧಾಂತ, ಹೋರಾಟಗಳನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಇದೆ ಎಂದರು.ನಾನು ಸದಾ ಮೊದಲ ಸಾಲಿನಲ್ಲಿ ಇರುವವನು. ಎರಡನೇ ಸಾಲಿಗೆ ಬರುವ ಮಾತೇ ಇಲ್ಲ. ಸಂಪುಟಕ್ಕೆ ಸೇರದಿದ್ದಕ್ಕೆ ಎರಡನೇ ಸಾಲಿನ ನಾಯಕರಾಗಿ ಬಿಡುವುದಿಲ್ಲ ಎಂದರು.
ಡಾ.ಎಚ್.ಸಿ. ಮಹದೇವಪ್ಪಗೆ ಸಚಿವ ಸ್ಥಾನ ಸಿಗಲಲ್ಲ ಎನ್ನುವ ಕಾರಣಕ್ಕಾಗಿ ಬೆಂಗಳೂರಿನಲ್ಲಿ ನಡೆದ ಹೋರಾಟ ಪಕ್ಷಾತೀತವಾಗಿ, ಜಾತ್ಯತೀತವಾಗಿ ಇತ್ತು. ಒಬ್ಬ ಹೋರಾಟಗಾರ, ಸೈದ್ಧಾಂತಿಕ ನಾಯಕನಿಗೆ ಅವಕಾಶ ಸಿಗದೆ ಇರುವ ಬಗ್ಗೆ ಸ್ವಾಭಾವಿಕವಾಗಿ ನಾಯಕರು ತಂತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಯಾರಿಗೂ ಮನಸ್ತಾಪ ಇಟ್ಟುಕೊಂಡಿಲ್ಲ. ನಾಯಕರು ತಮ್ಮ ಜವಾಬ್ದಾರಿಗೆ ತಕ್ಕಂತೆ ಮಾತನಾಡಿದ್ದಾರೆ ಎಂದರು.ಅಧಿಕಾರಕ್ಕಿಂತಲೂ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಟ ಮಾಡಬೇಕು. ಎಸ್‌ಐಆರ್ ನೆಪದಲ್ಲಿ ಮತದಾರರ ಹಕ್ಕನ್ನು ಕಸಿಯುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ, ಕೇಂದ್ರ ಚುನಾವಣಾ ಆಯೋಗ ಮಾಡುತ್ತಿದೆ. ಪಶ್ಚಿಮ ಬಂಗಾಳ ನಂತರ ಕರ್ನಾಟಕದಲ್ಲೂ ಮತದಾರರ ಹಕ್ಕನ್ನು ಕಸಿಯುವ ಕೆಲಸಕ್ಕೆ ಕೈ ಹಾಕಿರುವುದರ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಿಸಲಿದೆ. ಹೈಕಮಾಂಡ್ ಸೂಚನೆ ಕೊಟ್ಟ ದಿನ ನಡೆಯಲಿದೆ. ಸಂಪುಟಕ್ಕೆ ಸೇರುವ ಬಗ್ಗೆ ನಾನೇನೂ ಯಾರ ಬಳಿಗೂ ಹೋಗಲ್ಲ. ಜಾತ್ಯತೀತ ಜನತಾದಳ ರಚನೆಯಾದಾಗ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧದ ರಾಜಕೀಯ ಸ್ಪಷ್ಟ ಸಿದ್ಧಾಂತವಾಗಿತ್ತು. ಆದರೆ, ಒಂದು ಬಾರಿ ಕಾಂಗ್ರೆಸ್ ನೊಂದಿಗೆ, ಇನ್ನೊಂದು ಬಾರಿ ಬಿಜೆಪಿಯೊಂದಿಗೆ ಕೈ ಜೋಡಿಸಿ ಅಧಿಕಾರ ಮಾಡಿರುವ ಕಾರಣ ಯಾವ ತತ್ವ, ಸಿದ್ಧಾಂತ ಇಲ್ಲದಂತಾಗಿದೆ ಎಂದು ಅವರು ಜೆಡಿಎಸ್ ಅನ್ನು ಟೀಕಿಸಿದರು.