ಸಿದ್ದರಾಮಯ್ಯ ನನ್ನ ಮನೆ ದೇವರು, ಅವರಿಗೆ ದ್ರೋಹ ಮಾಡಿಲ್ಲ, ಮಾಡಲ್ಲ

| Published : Oct 01 2024, 01:16 AM IST

ಸಿದ್ದರಾಮಯ್ಯ ನನ್ನ ಮನೆ ದೇವರು, ಅವರಿಗೆ ದ್ರೋಹ ಮಾಡಿಲ್ಲ, ಮಾಡಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಅವರೇ ನನ್ನ ಮನೆ ದೇವರು, ಅವರೇ ನನ್ನ ಹೈಕಮಾಂಡ್. ಅವರಿಗೆ ಎಂದಿಗೂ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ನನಗೆ ಹೈಕಮಾಂಡ್ ಸಿದ್ದರಾಮಯ್ಯ ಅವರು. ಅವರು ಹೇಳಿದರೆ ಆ ಕ್ಷಣವೇ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರುಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾತ್ಮ, ನನ್ನ ಮನೆ ದೇವರು. ಅವರಿಗೆ ಮತ್ತು ಅವರ ಕುಟುಂಬಕ್ಕೆ ದ್ರೋಹ ಮಾಡುವಂತಹ ಕೆಲಸವನ್ನು ನಾನು ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಕೆ. ಮರೀಗೌಡ ಸ್ಪಷ್ಟಪಡಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೆತ್ತ ತಾಯಿ ಮೇಲಾಣೆ. ನನ್ನ ಮನೆ ದೇವರ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾನು ಯಾವುದೇ ರೀತಿಯಲ್ಲೂ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡಿಲ್ಲ ಎಂದರು.ಸಿದ್ದರಾಮಯ್ಯ ಅವರೇ ನನ್ನ ಮನೆ ದೇವರು, ಅವರೇ ನನ್ನ ಹೈಕಮಾಂಡ್. ಅವರಿಗೆ ಎಂದಿಗೂ ದ್ರೋಹ ಬಗೆಯುವ ಕೆಲಸ ಮಾಡಿಲ್ಲ. ನನಗೆ ಹೈಕಮಾಂಡ್ ಸಿದ್ದರಾಮಯ್ಯ ಅವರು. ಅವರು ಹೇಳಿದರೆ ಆ ಕ್ಷಣವೇ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಅವರು ತಿಳಿಸಿದರು.ಸಿಎಂ ಸಿದ್ದರಾಮಯ್ಯ ಸ್ವಾಗತಿಸುವ ವೇಳೆ ವರುಣ ಕ್ಷೇತ್ರದ ಕೆಲವು ಮುಖಂಡರು ನನ್ನ ಮೇಲೆ ಮುಗಿಬಿದ್ದರು. ಸಿದ್ದರಾಮಯ್ಯ ಅವರ ಸ್ಥಿತಿಗೆ ನೀವೇ ಕಾರಣ ಎಂದು ಮಾತನಾಡಿದರು. ಆಗ ಪೊಲೀಸರು ಬಂದು ಸಮಾಧಾನ ಮಾಡಿದರು. ಆ ವೇಳೆ ಯಾವುದೇ ಗಲಾಟೆ ಆಗಬಾರದು ಎಂದು ನಾನು ಹೊರಗೆ ಬಂದೆ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನಮ್ಮ ಪಕ್ಷದವರೇ ನನ್ನ ತೇಜೋವಧೆ ಮಾಡ್ತಾ ಇದ್ದಾರೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ನಾನು ಮುಡಾ ಅಧ್ಯಕ್ಷನಾಗಿ ಬಂದ ಮೇಲೆ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಹೇಳಾಗುತ್ತಿದೆ. ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆ ಮಾಡಿರುವುದು 2021ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರದಲ್ಲಿದ್ದಾಗ. ಆದರೆ ನಾನು ಮುಡಾ ಅಧ್ಯಕ್ಷನಾಗಿದ್ದು 2024ರಲ್ಲಿ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪಾರ್ವತಿ ಅವರಿಗೆ ನಿವೇಶನ ನೀಡಿರುವುದು ಕಾನೂನಾತ್ಮಕವಾಗಿಯೇ ಇದೆ. ಸಿದ್ದರಾಮಯ್ಯ ಅವರ ಮೇಲೆ ತನಿಖೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ನ್ಯಾಯಯುತವಾಗಿ ನಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.ಆದರೆ, ಈ ವಿಚಾರವನ್ನು ಮುಂದಿಟ್ಟುಕೊಂಡು ನನ್ನ ತೇಜೋವಧೆ ಮಾಡಲಾಗುತ್ತಿದೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರೇ ನನ್ನ ವಿರುದ್ಧ ಮಾತನಾಡುತ್ತಿದ್ದರೂ ಜಿಲ್ಲಾಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬೇಸರ ತರಿಸಿದೆ ಎಂದರು.ಮುಡಾದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಶಾಸಕರಾದ ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯ ಗಮನಕ್ಕೆ ತಾರದೇ ಯಾವುದೇ ನಿವೇಶನ ಹಂಚಿಕೆ ಮಾಡಬಾರದು ಎಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದೆ ಹೊರತು ಸರ್ಕಾರಕ್ಕೆ ಯಾವುದೇ ಪತ್ರ ಬರೆದಿಲ್ಲ. ಆದರೆ, ಹಿಂದಿನ ಆಯುಕ್ತರು ನನ್ನ ಮಾತನ್ನು ಕೇಳದೇ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಅವರು ಹೇಳಿದರು.‘ನನಗೆ 73 ವರ್ಷ ವಯಸ್ಸಾಗಿದೆ. ಮಕ್ಕಳಿಲ್ಲ. 40 ವರ್ಷ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಇದ್ದೇನೆ. ಮುಡಾ ಪ್ರಕರಣದಿಂದ ಅನಾರೋಗ್ಯಕ್ಕೆ ಒಳಗಾಗಿ 4 ಬಾರಿ ಆಸ್ಪತ್ರೆಗೆ ಸೇರಿದ್ದೇನೆ. ಅದರಿಂದ ಎಲ್ಲಿಯೂ ಬರಲು ಸಾಧ್ಯವಾಗಿಲ್ಲ. ಮುಡಾ ವಿಚಾರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಜನತೆ ತಪ್ಪು ತಿಳಿದುಕೊಂಡಿದ್ದಾರೆ. ಹೀಗಾಗಿ, ಈಗ ಉತ್ತರ ನೀಡಿದ್ದೇನೆ.’- ಕೆ. ಮರೀಗೌಡ, ಮುಡಾ ಅಧ್ಯಕ್ಷರು