ಸಾರಾಂಶ
ಸಿದ್ದರಾಮಯ್ಯ ಎಂದೂ ರಾಜಕೀಯ ಅಧಿಕಾರವನ್ನು ದುಬರ್ಳಕೆ ಮಾಡಿಕೊಂಡವರಲ್ಲ.
ಬಳ್ಳಾರಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನವರು ಏನೇ ಕುತಂತ್ರ ಮಾಡಿದರೂ ಸಿಎಂ ಸಿದ್ದರಾಮಯ್ಯ ಜಗ್ಗಲ್ಲ, ಬಗ್ಗಲ್ಲ ಎಂದು ಸಂಸದ ಈ.ತುಕಾರಾಂ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿನಾಕಾರಣ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಯತ್ನಿಸುತ್ತಿದೆ. ಆದರೆ, ಸಿದ್ದರಾಮಯ್ಯ ಹೋರಾಟಗಾರರು. ಬಿಜೆಪಿಯ ಯಾವುದೇ ಷಡ್ಯಂತ್ರದಿಂದ ಕುಗ್ಗುವ ವ್ಯಕ್ತಿಯಲ್ಲ ಎಂದರು.ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕಾಗಿ ಪತ್ನಿ ಪಾರ್ವತಮ್ಮನವರು ಅರಿಶಿಣ, ಕುಂಕುಮ ರೂಪದಲ್ಲಿ ನೀಡಿದ್ದ ಜಾಗವನ್ನು ವಾಪಸ್ ನೀಡಿದ್ದಾರೆ. ಈ ಮೂಲಕ ಬೇರೆಯವರಿಗೆ ಆದರ್ಶವಾಗಿದ್ದಾರೆ. ಸಿದ್ದರಾಮಯ್ಯ ಎಂದೂ ರಾಜಕೀಯ ಅಧಿಕಾರವನ್ನು ದುಬರ್ಳಕೆ ಮಾಡಿಕೊಂಡವರಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದವರು. ಕೇಂದ್ರದ ತನಿಖಾ ಸಂಸ್ಥೆಗಳನ್ನು ಕಪಿಮುಷ್ಠಿಯಲ್ಲಿಕೊಂಡಿರುವ ಬಿಜೆಪಿ ಆಟವಾಡುತ್ತಿದೆ ಎಂದು ದೂರಿದರು.
ಬಳ್ಳಾರಿಯಲ್ಲಿ ಸಂಸದರ ಕಚೇರಿ ಮಾಡುವುದು ಮುಖ್ಯವಲ್ಲ. ಅಭಿವೃದ್ಧಿ ಕೆಲಸಗಳಾಗುವುದು ಮುಖ್ಯ. ಕೇಂದ್ರದ ವಿವಿಧ ಯೋಜನೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸುವೆ. ₹1 ಕೋಟಿ ವೆಚ್ಚದಲ್ಲಿ ಪಕ್ಷದ ಕಚೇರಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಆಗಮನ ಹಿನ್ನೆಲೆಯಲ್ಲಿ ಸಂಡೂರು ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು. ಸಂಡೂರು ಜನತೆ ಈ ಹಿಂದಿನಿಂದಲೂ ಕಾಂಗ್ರೆಸ್‌ನ್ನು ಕೈ ಹಿಡಿದು ಬಂದಿದ್ದಾರೆ. ಮುಂದೆಯೂ ಕಾಂಗ್ರೆಸ್ ಜತೆ ಇರಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.