ಸಾರಾಂಶ
ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರ ವಿರುದ್ಧ ದೌರ್ಜನ್ಯ ಪ್ರಕರಣಗಳ ತನಿಖೆಗೆ ರಾಜ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ (ಎಸ್‌ಇಆರ್‌ಇ) 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ. ಎಸ್ಸಿ-ಎಸ್ಟಿ ಸಮುದಾಯ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ ನಿಗದಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಲು ಎಸ್ಇಆರ್‌ಇ ಘಟಕದಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರಿನಲ್ಲಿ ಎರಡು ಸೇರಿದಂತೆ ಒಟ್ಟು 33 ಠಾಣೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳ ನಿರ್ವಹಣೆಗೆ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ 450 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡಿಸಿಆರ್‌ಇ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮೇಲ್ಮಟ್ಟದ ಅಧಿಕಾರಿಗಳಿಗೆ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಅಧಿನಿಯಮ 1989ರ ಅನ್ವಯ ಪ್ರಕರಣಗಳನ್ನು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ನೀಡಲಾಗಿದೆ. ಈ ಮೊದಲು ಎಸ್ಪಿ-ಎಸ್ಪಿ ದೌರ್ಜನ್ಯಗಳ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಡಿವೈಎಸ್ಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದರು. ಆದರೆ ಸ್ಥಳೀಯ ಠಾಣೆಗಳ ಕಾರ್ಯದೊತ್ತಡ ಅಥವಾ ಇತರೆ ಕಾರಣಗಳಿಂದ ದೌರ್ಜನ್ಯ ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿತ್ತು. ಅಲ್ಲದೆ ಈ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣವು ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಡಿಸಿಆರ್‌ಇ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
33 ಠಾಣೆಗಳು ಆರಂಭ:
-ಪೂರ್ವ ಠಾಣೆ- ವೈಟ್‌ಫೀಲ್ಡ್, ಪೂರ್ವ, ಈಶಾನ್ಯ, ಆಗ್ನೇಯ
ಪಶ್ಚಿಮ ಠಾಣೆ- ದಕ್ಷಿಣ, ಉತ್ತರ, ಕೇಂದ್ರ ಹಾಗೂ ಪಶ್ಚಿಮ ವಿಭಾಗಗಳು
ಪ್ರತಿ ಜಿಲ್ಲಾ ಕೇಂದ್ರದ ಎಸ್ಪಿ ಕಚೇರಿಯಲ್ಲಿ ಠಾಣೆ ಆರಂಭ
ಸಮಾಜ ಕಲ್ಯಾಣ ಇಲಾಖೆ ಅನುಮತಿ ಕಡ್ಡಾಯ
ಈ ವಿಶೇಷ ಠಾಣೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸುವ ಮುನ್ನ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಡಿಸಲಾಗಿದೆ. ಅದೇ ರೀತಿ ಈ ಠಾಣೆಗಳ ನಿರ್ವಾಹಣಾ ವೆಚ್ಚವನ್ನು ಶೇ.50-50 ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಾಗೂ ಅನುದಾನ ಕೊರತೆಯಾದಲ್ಲಿ ರಾಜ್ಯ ಸರ್ಕಾರದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯ ನಿಧಿಯಿಂದ ಭರಿಸಲಾಗುತ್ತದೆ ಎಂದು ಹೇಳಲಾಗಿದೆ.