ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.ಕೊಡಗು ಜಿಲ್ಲಾ ಬಿಜೆಪಿಯಿಂದ ನಗರದ ಕೊಡವ ಸಮಾಜದಲ್ಲಿ ಶುಕ್ರವಾರ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ ಮೂರನೇ ಬಾರಿ ದೇಶದ ಪ್ರಧಾನಿಯಾಗಿದ್ದು ನರೇಂದ್ರ ಮೋದಿ ಅವರ ಸಾಧನೆ. ಇದು ಸಾಧಾರಣ ಗೆಲವಲ್ಲ. ಸಂವಿಧಾನ ಅಳಿಸುವ ಪಕ್ಷ ಕಾಂಗ್ರೆಸ್, ಇಂದು ಸಂವಿಧಾನದ ಉಳಿಸುವ ಬಗ್ಗೆ ಮಾತನಾಡುತ್ತಿದೆ. ಆದರೆ ನಿಜವಾಗಿ ಸಂವಿಧಾನ ಉಳಿದಿದೆ ಎಂದರೆ ಅದು ಬಿಜೆಪಿಯಿಂದ ಮಾತ್ರ ಎಂದರು.ರಾಜ್ಯ ಸರ್ಕಾರದಿಂದ ಬಿಜೆಪಿ ಕಾರ್ಯಕರ್ತರ ಮೇಲೆ, ಶಾಸಕರ ಮೇಲೆ ಕೇಸ್ ದಾಖಲು ಮಾಡುವ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದು ಖಂಡನಾರ್ಹ, ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಒಗ್ಗೂಡಬೇಕೆಂದು ಎಂದ ಅವರು, ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಂಸದ ಯದುವೀರ್ ಒಡೆಯರ್ ಮಾತನಾಡಿ, ನನಗೆ ರಾಜಕೀಯ ಅನುಭವ ಇಲ್ಲ, ಹವಾನಿಯಂತ್ರಿತ ಕೊಠಡಿಯಲ್ಲಿ ಇರುವವರು ಎಂದು ಹೇಳಿಕೆಗಳು ಚುನಾವಣೆ ಸಂದರ್ಭ ವ್ಯಕ್ತಗೊಂಡಿತ್ತು. ಆದರೂ ಹಲವು ಸವಾಲುಗಳನ್ನು ಎದುರಿಸಿ ಕೊಡಗಿನ ಕಾರ್ಯಕರ್ತರ ಕೆಲಸದಿಂದ ಸುಮಾರು 73 ಸಾವಿರ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ್ದೇನೆ ಎಂದರು.ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನ ಬಿಟ್ಟಿ ಭಾಗ್ಯಗಳ ನಡುವೆ ಲೋಕಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ 75 ಸಾವಿರಕ್ಕೂ ಅತ್ಯಧಿಕ ಮತಗಳನ್ನು ನೀಡಿದೆ. 65 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದರೂ ಯಾವುದೇ ಅಭಿವೃದ್ಧಿ ಆಗಿಲ್ಲ. ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಹಲವಾರು ಅಭಿವೃದ್ಧಿ ಕೆಲಸ ಮಾಡಿ ವಿಶ್ವಗುರು ಆಗಿದ್ದಾರೆ. ಭಾರತ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದೆ ಎಂದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಒಂದಲ್ಲಾ ಒಂದು ಸುತ್ತೋಲೆ ಜಾರಿಗೆ ತರುವ ಮೂಲಕ ಜನ ವಿರೋಧಿಯಾಗಿದೆ. ವನ್ಯಜೀವಿ ಕಾಯಿದೆಯಲ್ಲಿ ಜನರಿಗೆ ಕಿರುಕುಳ ನೀಡಿದೆ.ಜಮೀನಿನಲ್ಲಿರುವ ಮರಗಳು ಸರ್ಕಾರಕ್ಕೆ ಸೇರಿದ್ದು, ಕಂದಾಯ ಇಲಾಖೆ ಸರ್ವೇ ನಡೆಸಿ ಅರಣ್ಯ ಇಲಾಖೆಯ ಸುಪರ್ದಿಗೆ ನೀಡಬೇಕೆಂಬ ಸುತ್ತೋಲೆ ಹೊರಡಿಸಿತ್ತು. ಇದು ಜನವಿರೋಧಿ ಸುತ್ತೋಲೆಯಾಗಿದೆ. ತಾಕತ್ತಿದ್ದರೆ ವಾಪಸ್ ತೆಗೆಯಿರಿ, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಸಿಎನ್‌ಡಿ ಭೂಮಿಯನ್ನು ಮೀಸಲು ಅರಣ್ಯ ಮಾಡಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ಈ ಮೂರು ಸುತ್ತೋಲೆ ಕೂಡ ಹಿಂಪಡೆಯಬೇಕು. ಇಲ್ಲದಿದ್ದರೆ ಈ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಾಡ ಸುವಿನ್ ಗಣಪತಿ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಬಿ.ಬಿ. ಭಾರತೀಶ್, ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ, ಮಡಿಕೇರಿ ನಗರ ಅಧ್ಯಕ್ಷ ಉಮೇಶ್ ಸುಬ್ರಮಣಿ, ರಾಜ್ಯ ಪೂರ್ವ ಸೈನಿಕ ಪ್ರಕೋಷ್ಠ ಸಂಚಾಲಕ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಅಫ್ರು ರವೀಂದ್ರ, ರೈತ ಮೋರ್ಚಾ ಅಧ್ಯಕ್ಷ ರಂಜಿ ಪೂಣಚ್ಚ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಸ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಎಂ.ಪಿ. ರವಿ, ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ್ ಹಾಜರಿದ್ದರು................................ನಿರ್ಣಯಗಳ ಮಂಡಣೆ
ಮಡಿಕೇರಿಯಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿ ಅವರ ಮೂರನೇ ಬಾರಿ ಪ್ರಧಾನಿ ಆಗಿರುವುದರಿಂದ ಅಭಿನಂದನೆ ನಿರ್ಣಯವನ್ನು ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಂಡಿಸಿದರು. ಭಾರತೀಶ್, ತಳೂರು ಕಿಶೋರ್ ಕುಮಾರ್ ಅನುಮೋದಿಸಿದರು.ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಂಡಿಸಿದರು. ರಾಬಿನ್ ದೇವಯ್ಯ, ಬಿ.ಕೆ. ಅರುಣ್ ಕುಮಾರ್ ಅನುಮೋದಿಸಿದರು. ಎಸ್.ಜಿ. ಮೇದಪ್ಪ ರಾಜ್ಯ ಸರ್ಕಾರದ ವಿರುದ್ದ ಖಂಡನಾ ನಿರ್ಣಯ ಮಂಡಿಸಿದರು. ರೀನಾ ಪ್ರಕಾಶ್, ಸುಬ್ರಹ್ಮಣ್ಯ ಉಪಧ್ಯಾಯ ಅನುಮೋದಿಸಿದರು.