ದಶಕಗಳ ಬಳಿಕ ಅದೇ ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಧೃಡವಾಗಿ ಮುನ್ನೆಡೆಯುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಕರ್ನಾಟಕದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಸಾಂಸ್ಥಿಕ ರೂಪ ನೀಡಿದ ಮಹಾನ್ ನಾಯಕ ದಿವಂಗತ ಡಿ.ದೇವರಾಜ್ ಅರಸು. ದಶಕಗಳ ಬಳಿಕ ಅದೇ ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಧೃಡವಾಗಿ ಮುನ್ನೆಡೆಯುತ್ತಿದ್ದಾರೆ. ಅರಸು ನಂತರ ಪೂರ್ಣಾವಧಿಯ ಆಡಳಿತ ನೀಡಿ ಜನಮತದ ಭರವಸೆಯೊಂದಿಗೆ ಮತ್ತೇ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನಡೆ ರಾಜ್ಯದ ಜನರಲ್ಲಿ ಹೊಸ ವಿಶ್ವಾಸ ಮೂಡಿಸಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹರ್ಷ ವ್ಯಕ್ತಪಡಿಸಿದ್ದಾರೆ.ಅರಸು ನಂತರ ಅತೀ ಸುದೀರ್ಘ ಅವಧಿಯವರೆಗೆ ದಾಖಲೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಸಾಲಿನಲ್ಲಿ ಸಿದ್ದರಾಮಯ್ಯನವರು ಹೆಜ್ಜೆಯಿಡುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಹಾಗೂ ತಮ್ಮ ಆತ್ಮೀಯ ಗೆಳೆಯರಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ.
ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಭೂ ಸುಧಾರಣೆಯ ಮೂಲಕ ಅರಸು ಅವರು ಶೋಷಿತರಿಗೆ ಆತ್ಮಗೌರವ ನೀಡಿದರೇ, ಸಿದ್ದರಾಮಯ್ಯನವರು ಅನ್ನಭಾಗ್ಯದಿಂದ ಆರಂಭಿಸಿ ಇಂದಿನ ಪಂಚ ಗ್ಯಾರಂಟಿಗಳ ಮೂಲಕ ಅದೇ ಚಿಂತನೆ ವಿಸ್ತರಿಸಿದ್ದಾರೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ರಾಜಕೀಯ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ದಾಖಲೆ ಮಟ್ಟದಲ್ಲಿ ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯನವರಿಗೆ ರಾಜ್ಯದ ಆರ್ಥಿಕತೆ ಮೇಲೆ ಗಟ್ಟಿಯಾದ ಹಿಡಿತವಿದೆ. ಅಭಿವೃದ್ಧಿ ಮತ್ತು ಕಲ್ಯಾಣದ ನಡುವೆ ಸಮತೋಲನ ಸಾಧಿಸುವುದು ಅವರ ಆಡಳಿತದ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಗ್ಯಾರಂಟಿ ಯೋಜನೆಗಳ ಮೂಲಕ ಕಲ್ಯಾಣ ರಾಜ್ಯ ಪರಿಕಲ್ಪನೆಗೆ ಹೊಸ ಅರ್ಥ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಕೇವಲ ರಾಜಕಾರಣಿಯಲ್ಲ, ಶೋಷಿತರ ನೋವಿಗೆ ಸ್ಪಂಧಿಸುವ ಮಾನವತಾವಾದಿ ನಾಯಕ. ದೇವರಾಜ್ ಅರಸು ಅವರ ಕಾಲದಲ್ಲಿ ಹೇಗೆ ನಮ್ಮ ಸರ್ಕಾರ ಎಂಬ ಭಾವನೆ ಜನರಲ್ಲಿ ಮೂಡಿತ್ತು.ಅದೇ ವಿಶ್ವಾಸವು ಇಂದಿನ ಆಡಳಿತದಲ್ಲಿಯೂ ಕಾಣುತ್ತಿದೆ. ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಸಮೃದ್ಧ ಕರ್ನಾಟಕವನ್ನು ಕಟ್ಟುವ ಈ ಆಡಳಿತ ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ ಎಂದಿದ್ದಾರೆ.