- 2.85 ಲಕ್ಷ ಹುದ್ದೆ ಖಾಲಿ, ಪರಿಶಿಷ್ಟ-ಹಿಂದುಳಿದ ವರ್ಗದ 1.42 ಲಕ್ಷ ಹುದ್ದೆ ಭರ್ತಿ ಮಾಡಿಲ್ಲ: ರಘು ಕೌಟಿಲ್ಯ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇವರಾಜ ಅರಸು ಜೊತೆಗೆ ತಮ್ಮನ್ನು ಹೋಲಿಸಿಕೊಳ್ಳುವವರು ಇಂದು ಅದೇ ಅರಸು ಅವರ ಚಿಂತನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಪರಿಶಿಷ್ಟರು-ಹಿಂದುಳಿದ ವರ್ಗಕ್ಕೆ ಸಿಗಬೇಕಾಗಿದ್ದ 1.42 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಈ ಮೂಲಕ ನಿರುದ್ಯೋಗಿ ಯುವಕರನ್ನೂ ಕಾಂಗ್ರೆಸ್ ಸರ್ಕಾರ ವಂಚಿಸಿದೆ. ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಿಸಲೆಂದು ಬೊಗಳೆ ಮಾತುಗಳನ್ನಾಡುವ ಸಿಎಂ ಸಿದ್ದರಾಮಯ್ಯ, ಮೊದಲು ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಿ. ತಾವೇ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿರುವುದು ಸಿದ್ದರಾಮಯ್ಯಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿತ್ತು. ರಾಜ್ಯದಲ್ಲಿ ಇಗ ಶೇ.56ರಷ್ಟು ಮೀಸಲಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ, ನ್ಯಾ.ನಾಗಮೋಹನ ದಾಸ್ ವರದಿಯನ್ವಯ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲಾತಿ ನೀಡದೇ ಸಿದ್ದರಾಮಯ್ಯ ಸರ್ಕಾರ ವಂಚಿಸಿದೆ. ಖಾಲಿ ಹುದ್ದೆಗಳನ್ನು ಬಾರಿ ಉಳಿಸಿಕೊಂಡು, ನಿರುದ್ಯೋಗಿ ಯುವಜನರ ಭವಿಷ್ಯಕ್ಕೆ ಕಲ್ಲುಹಾಕಿದೆ ಎಂದು ಆರೋಪಿಸಿದರು.


ಪಂಚಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟರು- ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ಕೆ ಮೀಸಲಾಗಿದ್ದ ಹಣವನ್ನೆಲ್ಲಾ ರಾಜ್ಯ ಸರ್ಕಾರ ಬರಿದುಮಾಡುತ್ತಿದೆ. ಭ್ರಷ್ಟಾಚಾರ, ಬೆಲೆ ಏರಿಕೆಯೂ ಹೆಚ್ಚುತ್ತಿದೆ. ಪ್ರತಿ 500 ಜನರಿಗೊಂದು ಹೆಂಡದಂಗಡಿ ತೆರೆಯಲು ಅನುಮತಿ ನೀಡಿ, ರಾಜ್ಯವನ್ನು ಕುಡುಕರ ರಾಜ್ಯವಾಗಿಸಲು ಹೊರಟಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶ ದೊರತಿಲ್ಲ. ಸಾಕಷ್ಟು ಹಿಂದುಳಿದ ಜಿಲ್ಲೆಗಳಲ್ಲಿ ಹೊಸ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅನುದಾನದ ಕೊರತೆ ಇದೆ. ಹೀಗಾಗಿ, ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಿಲ್ಲಿಸುವ ಪರಿಸ್ಥಿತಿ ಬಂದಿದೆ ಎಂದು ರಘು ಕೌಟಿಲ್ಯ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ. ಜಯಮ್ಮ, ಮುಖಂಡರಾದ ಎ.ಎಸ್.ವೆಂಕಟೇಶ, ಮಹೇಂದ್ರ ಹೆಬ್ಬಾಳ್, ರಘು ಅಂಬರಕರ್, ಕಿರೀಟ್ ಕಲಾಲ್, ಐರಣಿ ಅಣ್ಣೇಶ ಇತರರು ಇದ್ದರು.

- - -

(ಬಾಕ್ಸ್‌)

* ಉಪ ಚುನಾವಣೆಯಲ್ಲಿ ಬಿಜೆಪಿಗೇ ಗೆಲುವು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದ್ದು, ಈ ಹಿನ್ನೆಲೆ ನಿನ್ನೆಯಷ್ಟೇ ಹಿಂದುಳಿದ ವರ್ಗಗಳ ಪ್ರಮುಖ ಸಭೆ ನಡೆಸಿದ್ದೇವೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ಹಿಂದುಳಿದ ವರ್ಗಗಳು, ಪರಿಶಿಷ್ಟರೇ ಹೆಚ್ಚಾಗಿರುವ ದಕ್ಷಿಣ ಕ್ಷೇತ್ರದಲ್ಲಿ ಈ ಸಲ ಬಿಜೆಪಿ ಜಯ ದಾಖಲಿಸಲಿದೆ. ಹಿಂದುಳಿದ ವರ್ಗ, ಪರಿಶಿಷ್ಟರು ಬಿಜೆಪಿ ಬೆನ್ನಿಗೆ ನಿಲ್ಲಲಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗುಂಪು ಇಲ್ಲ. ಇರುವುದೊಂದೇ ಗುಂಪು ಅದು ಬಿಜೆಪಿ. ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು, ಸೂಕ್ತ, ಸಮರ್ಥ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಿದೆ. ಪರಿಶಿಷ್ಟರು, ಹಿಂದುಳಿದ ವರ್ಗಗಳಿಗೆ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲವೆಂಬ ಬೇಸರವಿದೆ. ಹಾಗಾಗಿ, ಈ ಸಲ ಬಿಜೆಪಿ ಗೆಲುವು ನಿಶ್ಚಿತ ಎಂದರು.

- - -

-12ಕೆಡಿವಿಜಿ9: ದಾವಣಗೆರೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.