ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಿಎಂ ಸಿದ್ಧರಾಮಯ್ಯನವರೇ ನಿಮ್ಮ ಮೇಲೆ ಆರೋಪ ಇರುವುದರಿಂದ ನೀವು ಮೊದಲು ರಾಜೀನಾಮೆ ಕೊಡಬೇಕು. ನಿಮ್ಮ ವಿರುದ್ಧದ ಆರೋಪಕ್ಕೆ ಹೆದರಿ ನೀವು 2013ರಲ್ಲಿ ಲೋಕಾಯುಕ್ತ ಬಂದ್ ಮಾಡಿದ್ದೀರಿ. ನಿಮ್ಮ ಕೈಯಲ್ಲೇ ಇರುವ ಅಧಿಕಾರಿಗಳಿಂದ ನಿಮ್ಮ ವಿಚಾರಣೆ ಹೇಗೆ ನಡೆಯುತ್ತದೆ? ಲೋಕಾಯುಕ್ತದಿಂದ ನ್ಯಾಯ ಸಿಗೋಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ನಗರದ ಡಿಸಿ ಕಚೇರಿ ಬಳಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಅವರು, ವಿಚಾರಣೆ ಮಾಡೋರು, ಮಾಹಿತಿ ಪಡೆಯುವವರು ಎಲ್ಲರೂ ನಿಮ್ಮವರೇ. ಕೆಲ ಫೈಲ್ ಸುಡಲಾಗಿದೆ. ಕೆಲವು ತಿದ್ದುಪಡಿ ಆಗಿವೆ. ಮುಡಾದಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಎಂದು ಮಾಹಿತಿ ಇದೆ. ನಿಮ್ಮದೆ ಲೋಕಾಯುಕ್ತ, ನಿಮ್ಮದೇ ಅಧಿಕಾರಿಗಳು ನಿಮ್ಮನ್ನ ಅಪರಾಧಿ ಹೇಗೆ ಮಾಡೋಕೆ ಆಗುತ್ತೆ? ಹಾಗಾಗಿ ಮೊದಲು ನೀವು ರಾಜೀನಾಮೆ ಕೊಡಿ. ನಂತರ ವಿಚಾರಣೆ ಎದುರಿಸಿ. ನಿಮ್ಮ ಚೇಲಾ ಕೆಲವು ಫೈಲ್‌ಗಳನ್ನು ಸುಟ್ಟು ಹಾಕಿದ್ದಾರೆ. ನೀವು ರಾಜೀನಾಮೆ ಕೊಟ್ಟು ವಿಚಾರಣೆ ಎದುರಿಸಬೇಕು ಎಂದು ಆಗ್ರಹಿಸಿದರು.
ಲಕ್ಷ್ಮೀ ಹೆಬ್ಬಾಳ್ಕರಗೆ ಮಂಪರು ಪರೀಕ್ಷೆ ಆಗಲಿ:ಬೆಳಗಾವಿ ತಹಸೀಲ್ದಾರ್ ಕಚೇರಿ ಅಧಿಕಾರಿ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಪದೇ ಪದೇ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿವೆ. ತಮ್ಮ ಸುತ್ತ ಕಮೀಷನ್ ಏಜೆಂಟರನ್ನು ಇಟ್ಟುಕೊಂಡಿದ್ದಾರೆ. ಬಹಳ ಅಧಿಕಾರಿಗಳು ಬಲಿಯಾಗಿದ್ದಾರೆ. ಕೆಲವರು ಸಹವಾಸವೇ ಬೇಡ ಎಂದು ಕೆಲಸವನ್ನೇ ಬಿಟ್ಟು ಹೋಗುತ್ತಿದ್ದಾರೆ. ರಾಜ್ಯದಲ್ಲಿ ತಹಸೀಲ್ದಾರ್ ಕಚೇರಿ ಕಮಿಷನ್ ಏಜೆಂಟ್ ಕಚೇರಿ ಆಗಿವೆ. ನೀವೇ ಕಚೇರಿಗಳನ್ನು ಕಮೀಷನ್ ಕಚೇರಿ ಮಾಡಿದ್ದೀರಿ. ಲಕ್ಷ್ಮೀ ಹೆಬ್ಬಾಳ್ಕರ ತಪ್ಪು ಮಾಡಿ ಹೀಗೆ ಹೇಳಿಕೊಳ್ತಿದ್ದಾರೆ. ಈಗ ನನಗೆ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಅವರ ಪಿಎ ಮಂಪರು ಪರೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಕೆಲವು ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಮುಸ್ಲಿಂ ಮುಖಂಡರ ಪಾಲಾಗಿದೆ. ಖರ್ಗೆ ಕುಟುಂಬ, ಹ್ಯಾರಿಸ್, ಜಮೀರ್ ಕುಟುಂಬದ ಹೆಸರಿದೆ. ಇದೆ ಕಾರಣಕ್ಕೆ ಈ ವಿಚಾರಗಳು ಬರ್ತಿವೆ. 5 ಲಕ್ಷ ಎಕರೆ ಇದ್ದದ್ದು, 9.5 ಲಕ್ಷ ಎಕರೆ ಆಗಿದೆ. ಅದು ಹೇಗೆ? ಯಾವ ಅಲ್ಲಾನ ಭಕ್ತ ದಾನ ಕೊಟ್ಟ ಹೇಳಿ? ವಿಜಯಪುರದಲ್ಲಿ ರೈತರಿಗೆ ನೋಟಿಸ್ ಕೊಟ್ಟಂತೆ, ದೇಶದೆಲ್ಲೆಡೆ ಕೊಟ್ಟಿದ್ದೀರಿ. ನಿಮ್ಮ ಟ್ರಿಬ್ಯೂನಲ್ ಎದುರು ನಾವು ಕೈಕಟ್ಟಿ ನಿಲ್ಲಬೇಕು ಎಂದರು.9 ಲಕ್ಷಕ್ಕೂ ಅಧಿಕ ಎಕರೆ ಜಮೀನು ವಶಕ್ಕೆ ಪಡೆದಿದ್ದು, ಒಂದು ಲಕ್ಷಕ್ಕೂ ಅಧಿಕ ಪ್ರದೇಶವನ್ನು ಮುಸ್ಲಿಂ ಮುಖಂಡರು, ನಾಯಕರು ವಶಕ್ಕೆ ಪಡೆದು ಲ್ಯಾಂಡ್ ಮಾಫಿಯಾ ಮಾಡುತ್ತಿದ್ದಾರೆ. ರೈತರ ಜಮೀನುಗಳಿಗೆ ನೋಟಿಸ್ ಕೊಟ್ಟು ವಕ್ಫ್ ಲ್ಯಾಂಡ್ ಮಾಡುತ್ತಿದ್ದಾರೆ. ಸಾವಿರ ಎಕರೆ ಇದ್ದ ವಕ್ಫ್ ಜಮೀನು 9 ಲಕ್ಷಕ್ಕೂ ಅಧಿಕ ಎಕರೆ ಆಗಿದೆ. ಇದು ಹೇಗೆ ಸಾಧ್ಯ? ದೇಶದಲ್ಲಿ ಎಷ್ಟು ಮುಸ್ಲಿಮರು ಅಲ್ಲಾನ ಹೆಸರಿನಲ್ಲಿ ದಾನ ಮಾಡಿದ್ದಾರೆ? ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ವಕ್ಫ್ ಪದವೇ ಇಲ್ಲ. 1955ರ ವೇಳೆ ನೆಹರು ವಕ್ಫ್ ಕಾನೂನು ತಂದಿದ್ದಾರೆ. ವಕ್ಫ್ ಆ್ಯಕ್ಟ್ ಅಮೈನಮೆಂಟ್ ಮಾಡಿ ವಿಶೇಷ ಅಧಿಕಾರ ಕೊಟ್ಟಿದೆ. ವಕ್ಫ್ ಟ್ರಿಬ್ಯೂನಲ್ ಮಾಡಿದ್ರು, ಸುಪ್ರೀಂ, ಹೈಕೋರ್ಟ್, ಜಿಲ್ಲಾಧಿಕಾರಿಗಳ ರೆವಿನ್ಯೂ ಅಧಿಕಾರ ಕಸಿದುಕೊಂಡರು. ಇಂದೀಕರಣ ಆದರೆ ನ್ಯಾಯ ಸಿಗುವುದಿಲ್ಲ. ವಿಜಯಪುರದಲ್ಲಿ 16 ಸಾವಿರ ಎಕರೆ ವಕ್ಫ್ ಪಾಲಾಗಿದೆ. ಇನ್ನೂ ರೈತರು ನಮ್ಮ ಬಳಿ ಬರುತ್ತಿದ್ದಾರೆ, ನ್ಯಾಯಕ್ಕಾಗಿ ನಾವು ಧರಣಿ ಕುಳಿತಿದ್ದೇವೆ ಎಂದು ಹೇಳಿದರು.
ಜೆಪಿಸಿ ಚೇರ್ಮನ್ನರಿಗೆ ನಾನು, ಯತ್ನಾಳರು ಮಾತಾಡಿದ್ದೇವೆ. ವಿಜಯಪುರ ಜಿಲ್ಲೆಯ ಸಮಸ್ಯೆ ಹೇಳಿದ್ದೇವೆ, ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರರಿಸಂ ನಡೆಯುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದೇವೆ. ಸ್ವಾಮೀಜಿಗಳು ಹಾಗೂ ರೈತರ ಅಹವಾಲು ಕೇಳ್ತಾರೆ. ನಮ್ಮ ನೋವನ್ನು ಅಧ್ಯಕ್ಷರು ಸ್ವೀಕಾರ ಮಾಡ್ತಾರೆ. ಆ್ಯಕ್ಟ್ ಮಾಡುವ ವೇಳೆ ನಮ್ಮ ಮನವಿ ಪುರಸ್ಕರಿಸಲಾಗುತ್ತೆ. ನೋವಾದವರು, ಜಮೀನು ಕಳೆದುಕೊಂಡವರು ನ.7ರಂದು ಧರಣಿ ಸ್ಥಳಕ್ಕೆ ಬನ್ನಿ. ಜಮೀರ್ ಮತಾಂಧ, ಹೊಸ ಆಸ್ತಿಯನ್ನು ವಕ್ಫ್‌ಗೆ ಸೇರಿಸುತ್ತಿದ್ದಾರೆ. ಮುಸ್ಲಿಂ ಜನರಿಗೆ ಬಾಡಿಗೆ ಕೊಟ್ಟೊರು ಹುಷಾರ್, ನನಗೆ ಮಾಹಿತಿ ಬಂದಿವೆ, ಬಾಡಿಗೆ ಕೊಟ್ಟ ಮನೆಯನ್ನೇ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.ಕೋಟ್ಸಚಿವ ಭೈರತಿ ಸುರೇಶ ಮೇಲೆ ಸಿಎಂ ಹಾಗೂ ಸಿಎಂ ಪತ್ನಿ ಮೇಲೆ ಕ್ರಮವಾಗಬೇಕು. ನೀವು ನಿರಪರಾಧಿಗಳಲ್ಲ, ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ನೀವು ರಾಜೀನಾಮೆ ನೀಡಿದ ಬಳಿಕವೇ ತನಿಖೆ ಸರಿಯಾಗಿ ನಡೆಯುತ್ತದೆ. ಇ.ಡಿ ತನಿಖೆಯಲ್ಲಿ ಫೈಲ್ ಕಾಣೆಯಾಗಿರೋದು ಬಯಲಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದೇ ಸೂಕ್ತ.
ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ