ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯರ ಅನುದಾನ ಬಲ

| Published : Mar 02 2024, 01:48 AM IST

ಸಾರಾಂಶ

ಹೊಸದುರ್ಗ ಪಟ್ಟಣದ ಹಿರಿಯೂರು ಟಿಎಪಿಸಿಎಂಎಸ್ ಸಂಘದ ಖಾಲಿ ನಿವೇಶನದಲ್ಲಿ ಗೋದಾಮು ಹಾಗೂ 4 ಮಳಿಗೆ ನಿರ್ಮಾಣಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಹೊಸದುರ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 25 ಕೋಟಿ ರು. ಅನುದಾನ ನೀಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು. ಪಟ್ಟಣದ ಹಿರಿಯೂರು ಮುಖ್ಯ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಸಂಘದ ಖಾಲಿ ನಿವೇಶನದಲ್ಲಿ 1000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಹಾಗೂ 4 ಮಳಿಗೆ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 25 ಕೋಟಿ ಅನುದಾನದಲ್ಲಿ 8 ಕೋಟಿ ರು. ವೆಚ್ಚದಲ್ಲಿ ದೇವಾಲಯಗಳ ನಿರ್ಮಾಣ, 13 ಕೋಟಿ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ನನೆಗುದಿಗೆ ಬಿದ್ದಿದ್ದ ಸಮುದಾಯ ಭವನ ನಿರ್ಮಾಣಕ್ಕೆ 4 ಕೋಟಿ ರು. ಅನುದಾನ ನೀಡಲಾಗಿದೆ. ರಾಜ್ಯ ಸರ್ಕಾರ ಆರ್ಥಿಕ ವಿಷಯದಲ್ಲಿ ಶಿಸ್ತುಬದ್ಧವಾಗಿದೆ. ಕ್ಷೇತ್ರಕ್ಕೆ ಬೇಕಾದ ಅನುದಾನ ನೀಡುತ್ತಿದೆ ಎಂದರು.ಪಡಿತರ ದಾಸ್ತಾನುಗಳನ್ನು ಶೇಖರಣೆ ಮಾಡಲು 1 ಕೋಟಿ ರು. ವೆಚ್ಚದಲ್ಲಿ ಗೋದಾಮು ಹಾಗೂ ಸುಸಜ್ಜಿತವಾದ 4 ಮಳಿಗೆ ನಿರ್ಮಿಸಲಾಗುತ್ತಿದೆ. ಬರುವ ಜುಲೈ ತಿಂಗಳೊಳಗೆ ಗೋದಾಮು ಕಟ್ಟಡ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಹಿರಿಯೂರು ಮುಖ್ಯ ರಸ್ತೆಯಿಂದ ಸಂಘದ ಗೋದಾಮುಗಳ ಮುಂಭಾಗದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 50 ಲಕ್ಷ ರು. ಅನುದಾನ ನೀಡಲಾಗುವುದು ಎಂದರು.ಹಾಗಲಕೆರೆ, ಮತ್ತೋಡು, ಚಿಕ್ಕಬ್ಯಾಲದಕೆರೆ ರಸ್ತೆ ಅಭಿವೃದ್ಧಿಗೆ ಗಣಿಬಾಧಿತ ಜಿಲ್ಲೆಗಳ ಅನುದಾನದಡಿಯಲ್ಲಿ 40 ಕೋಟಿ ರೂ ಗಳ ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರು ಕೆಲಸ ಪ್ರಾರಂಭಿಸಲಿದ್ದಾರೆ. ಕಳೆದ 20 ವರ್ಷಗಳಿಂದ ಹಾಗಲಕೆರೆ-ಮತ್ತೋಡು-ಚಿಕ್ಕಬ್ಯಾಲದಕೆರೆ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಕೆಲವು ಭಾಗದಲ್ಲಿ ಡಾಂಬಾರೀಕರಣ ಆಗಿದೆ. ಉಳಿದ ಕಡೆ ದುರಸ್ಥಿ ಕಾರ್ಯ ನಡೆಯಲಿದೆ. 1 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸರಕಾರ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದೆ ಎಂದರು. ಈ ವೇಳೆ ಜಿಲ್ಲಾ ಬ್ಯಾಂಕಿನ ಉಪಾಧ್ಯಕ್ಷ ಎಚ್.ಬಿ. ಮಂಜುನಾಥ್, ನಿರ್ದೇಶಕ ಎಸ್.ಆರ್.ಗಿರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾರೇಹಳ್ಳಿ ಬಸವರಾಜು, ನಿರ್ದೇಶಕ ಎಚ್.ಟಿ. ಮಂಜುನಾಥ್, ರಾಮಚಂದ್ರಪ್ಪ, ಎಸ್.ಸಿ. ರಮೇಶ್, ಆರ್.ರೇಣುಕಾ, ಎಂ.ಎಸ್.ಸುವರ್ಣಮ್ಮ, ಶ್ರೀಧರ್ ಭಟ್, ದಾರಾಮಾದಪ್ಪ, ಚಂದ್ರಪ್ಪ, ಕಾರ್ಯದರ್ಶಿ ಸಂತೋಷ್, ಪುರಸಭೆ ಸದಸ್ಯ ಜಾಫರ್ ಸಾಕ್, ಮಾಜಿ ಸದಸ್ಯ ವೆಂಕಟೇಶ್ ದಳವಾಯಿ ಮತ್ತಿತರಿದ್ದರು.