ಹಿರಿಯೂರು ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಎಂ.ಸಿದ್ದೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಸಿದ್ದರಾಮೇಶ್ವರರ ಲೋಕ ಕಲ್ಯಾಣದ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಎಂ.ಸಿದ್ದೇಶ್ ಅಭಿಪ್ರಾಯಪಟ್ಟರು.ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಚರಿಸಿದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಚನ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಿದ್ದರಾಮೇಶ್ವರರು ಅನುಭವ ಮಂಟಪದ ಮೂರನೇ ಪೀಠಾಧ್ಯಕ್ಷರಾಗಿದ್ದರು. ಹಲವಾರು ಕೆರೆಗಳನ್ನು ನಿರ್ಮಿಸುವ ಮೂಲಕ ಕಾಯಕಯೋಗಿ ಎಂದೇ ಹೆಸರಾದ ಅವರ ವಚನಗಳಲ್ಲಿ ಸಾಮಾಜಿಕ ಕಳಕಳಿ ಪ್ರಧಾನವಾಗಿದೆ ಎಂದರು.ಆಂಗ್ಲಭಾಷೆ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಕಪಿಲಸಿದ್ದ ಮಲ್ಲಿಕಾರ್ಜುನ, ಯೋಗಿನಾಥ ಎಂಬ ಅಂಕಿತದಲ್ಲಿ ವಚನ ರಚಿಸಿರುವ ಸಿದ್ದರಾಮೇಶ್ವರರು ಸುಮಾರು 1162 ವಚನಗಳನ್ನು ರಚಿಸಿದ್ದಾರೆ. ಆಧುನಿಕ ವ್ಯವಸ್ಥೆ ಇಲ್ಲದ ಕಾಲದಲ್ಲಿಯೇ ಜಲ ಸಂರಕ್ಷಣೆ ಮಾಡಿದ ಶ್ರೇಯ ಸಿದ್ದರಾಮೇಶ್ವರರದು. ಸ್ವಾರ್ಥಕ್ಕಾಗಿ ಮಾಡುವ ಸಾಧನೆಗಿಂತ ಸಮಾಜದ ಒಳಿತಿಗೆ ಮಾಡುವ ಕಾಯಕ ಶ್ರೇಷ್ಠ ಎಂದು ಸಾರಿದ ಅವರು ಕಾಯಕದ ಮಹತ್ವ ತಿಳಿಸಿದರು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ, ಬಿಇಒ ಸಿಎಂ ತಿಪ್ಪೇಸ್ವಾಮಿ, ಸಿಡಿಪಿಒ ರಾಘವೇಂದ್ರ, ಸಿಪಿಐಗಳಾದ ಮಹಮ್ಮದ್ ಸಿರಾಜ್, ಆನಂದ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರ ರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ನಾಯ್ಕ, ಮೀನುಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್ ಸಮಾಜದ ಮುಖಂಡರಾದ ಟಿ ಚಂದ್ರಶೇಖರ್, ಭೂತಾಭೋವಿ, ಟಿ.ಕೃಷ್ಣಮೂರ್ತಿ, ಟಿ.ಆರ್ ಗೋಪಾಲ್, ನಟೇಶ್, ಈಶ್ವರಪ್ಪ, ಹನುಮಂತಪ್ಪ, ತಿಮ್ಮರಾಜ್, ವೆಂಕಟೇಶ್, ಸಂತೋಷ್, ಗಂಗಾಧರ್, ಭೂತೇಶ್, ಪೂಜಾರ್ ತಿಮ್ಮಯ್ಯ, ರಾಜಪ್ಪ ಮುಂತಾದವರು ಹಾಜರಿದ್ದರು.