ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೆರೆಗಳನ್ನು ಕಟ್ಟಿಸಿ ಜಾತಿ-ಭೇದವಿಲ್ಲದೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಸಮಾಜಿಕ ಸಮಾನತೆ ತರಲು ಪ್ರಯತ್ನಿಸಿದ ಹರಿಕಾರ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಸಿದ್ದರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸುವತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೆರೆಗಳನ್ನು ಕಟ್ಟಿಸಿ ಜಾತಿ-ಭೇದವಿಲ್ಲದೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ಸಮಾಜಿಕ ಸಮಾನತೆ ತರಲು ಪ್ರಯತ್ನಿಸಿದ ಹರಿಕಾರರಾಗಿ ಸಮಾಜ ಸೇವಕರಿಗೆ ಆದರ್ಶವಾಗಿದ್ದಾರೆ ಎಂದು ಗ್ರೇಡ್೨ ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ ೮೫೩ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.೧೨ನೇ ಶತಮಾನದಲ್ಲಿಯೇ ಸಿದ್ದರಾಮೇಶ್ವರರು ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದವರು ಗ್ರಾಮಗಳ ಅಭಿವೃದ್ದಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಆಸರೆಯಾಗಿ ನಿಂತವರು ಸಿದ್ದರಾಮೇಶ್ವರರು ಜ್ಞಾನ ಪ್ರಚಾರ, ಕಾಯಕ, ದಾಸೋಹದಂತಹ ಮಹತ್ತರ ಕಾರ್ಯವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ತಾಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಕಾರ್ಯದರ್ಶಿ ದೊಡ್ಡರಾಮಯ್ಯ ಮಾತನಾಡಿ, ಶಿವಯೋಗಿ ಶ್ರೀ ಸಿದ್ದರಾಮೇಶ್ವರರು ಭೋವಿ ಸಮಜದ ಕುಲ ಗುರುಗಳಾಗಿದ್ದು, ವಿಶೇಷವಾಗಿ ೧೨ನೇ ಶತಮಾನದಲ್ಲಿ ಅಲ್ಲಮಪ್ರಭು ಬಸವಣ್ಣ, ಅಕ್ಕಮಹಾದೇವಿ ಇವರ ಸಮಕಾಲೀನವಾರಾಗಿದ್ದು ಇವರು ಅನುಭವ ಮಂಟಪದಲ್ಲಿ ಭಾಗವಹಿಸಿ ವಚನ ರಚಿಸಿದರು, ಇವರು ೬೮,೦೦೦ ವಚನಗಳನ್ನ ರಚಿಸಿದ್ದಾರೆ, ಸಿದ್ದರಾಮೇಶ್ವರರು ತಮ್ಮ ಸಮಾಜ ಸೇವೆ ಮತ್ತು ಆಧ್ಯಾತ್ಮಿಕ ಸಾಧನೆಗಳಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಸಿದ್ದರಾಗಿದ್ದಾರೆ ಎಂದರು. ತಾಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಪಧಾದಿಕಾರಿ ರಾಜು ಮಾತನಾಡಿ, ೧೨ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ವಚನಗಳ ಮೂಲಕ ಪ್ರಚಾರ ಮಾಡಿದರು ಹಾಗೂ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ವೆಂಕಟೇಶ್‌ಮೂರ್ತಿ, ಆರ್.ಐ ಬಸವರಾಜು, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ, ಯಮುನಾ, ಅಶ್ವತ್ಥಪ್ಪ, ವೆಂಕಟಪ್ಪ, ನಾಗರಾಜು, ಸರೇಶ್, ನಟರಾಜು, ಸಿದ್ದರಾಜು, ಬಿ.ಆರ್.ಮಂಜುನಾಥ್, ದೇವರಾಜು. ಹನುಮಂತರಾಯ, ರಾಮಕೃಷ್ಣ, ರಾಮಯ್ಯ, ಯಲ್ಲಪ್ಪ. ನಾಗರಾಜಪ್ಪ ನಾಗೇಶ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಆಧಿಕಾರಿಗಳು ಭಾಗವಹಿಸಿದ್ದರು.