ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ

| Published : Jul 10 2024, 12:37 AM IST

ಸಿದ್ದರಾಮೇಶ್ವರ ಶ್ರೀ ದೀಕ್ಷಾ ರಜತ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಭೋವಿ ಗುರುಪೀಠ ಶಾಶ್ವತವಾಗಿ ಜನಾಂಗದ ಬೆಳಕಾಗಿ ಉನ್ನತ ಹಾದಿಯಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಒಡಮೂಡುತ್ತಿದೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚಿತ್ರದುರ್ಗದ ಗುರುಪೀಠದಲ್ಲಿ ಜು.20ರಂದು ಭೋವಿ ಸಮಾಜದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿರವರ ದೀಕ್ಷಾ ರಜತ ಮಹೋತ್ಸವ ಆಯೋಜಿಸಲಾಗಿದ್ದು, ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀಗಳು ಅಕ್ಷರ ವಂಚಿತ ಸಮುದಾಯಕ್ಕೆ ವೈಚಾರಿಕ, ವೈಜ್ಞಾನಿಕ ತಳಹದಿ ಮೇಲೆ ಜ್ಞಾನದ ದಾರೆಯನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಭೋವಿ ಗುರುಪೀಠ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದಾರೆ ಎಂದರು. ವಲಸೆ ಜೀವನದಲ್ಲಿ ಹರಿದು ಹಂಚಿಹೋಗಿರುವ ಜನಾಂಗಕ್ಕೆ ವೇದಿಕೆಯಾಗಿ ಭೋವಿ ಗುರುಪೀಠ ಶಾಶ್ವತವಾಗಿ ಜನಾಂಗದ ಬೆಳಕಾಗಿ ಉನ್ನತ ಹಾದಿಯಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಒಡಮೂಡುತ್ತಿದೆ. ಹೀಗಾಗಿ ಅವರನ್ನು ಅಭಿನಂದಿಸುವ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಜನರು ಮತ್ತು ಬೇರೆ ರಾಜ್ಯಗಳಿಂದ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಸುಮಾರು 25 ಸಾವಿರ ಸಮಾಜ ಬಾಂಧವರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜತಂಗಡಿ ಅಧ್ಯಕ್ಷತೆ, ಮಾಜಿ ಸಚಿವ ಅರವಿಂದ ಲಿಂಬಾವಳಿರವರ ನೇತೃತ್ವ, ಸಮುದಾಯದ ಹಾಲಿ ಮಾಜಿ ಶಾಸಕರು, ಸಂಸದರು ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಮಂತ್ರಾಲಯದ ಸುಭುದೇಂದ್ರ ತೀರ್ಥರು, ಕನಕ ಗುರುಪೀಠದ ಜಗದ್ಗುರಗಳು, ಹಿಂದುಳಿದ ದಲಿತ ಮಠಾದೀಶರು ಸೇರಿ ರಾಜ್ಯದ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಅದೇ ದಿನದಂದು ಬೆಳಗ್ಗೆ ಧರ್ಮ ಸಂಸತ್ ಕಾರ್ಯಕ್ರಮ ಜರುಗುವುದು. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೊಂದು ಭೋವಿ ಜನೋತ್ಸವ ಕಾರ್ಯಕ್ರಮವಾಗಲಿದೆ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದೆ ಉಳಿದಿತ್ತು. ಇದೀಗ ಸಂಘಟಿತವಾಗುತ್ತಿದೆ. ಯಾವುದೇ ಸಮುದಾಯಗಳು ಸಂಘಟನೆಯತ್ತ ಮುಖ ಮಾಡಿದರೆ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಉಳ್ಳವರು ಬಲವಾಗಿ ಸಂಘಟನೆಯಾಗುತ್ತಿದ್ದಾರೆ ಎಂಬ ಭಯ ಕೆಳ ಸಮುದಾಯದವರಿಗೆ ಬೇಡ. ನಮ್ಮ ಸಂಘಟನೆ ನಾವು ಗಟ್ಟಿಗೊಳಿಸಬೇಕಾಗಿದೆ ಎಂದರು.

ಮಠದ ಪ್ರತೀತಿ ದಶಕದಿಂದ ಬೆಳೆದು ಬಂದಿದೆ. ಸಮಾಜ ಸೇವಾ ದೀಕ್ಷೆ ನೆನಪು ಹಾಗೂ ಪಟ್ಟಾಭಿಷೇಕದ ಸಂಭ್ರಮದ ನಿಮಿತ್ತ ಸಂಸದರಾಗಿ, ಶಾಸಕರಾಗಿ, ವಿವಿಧ ಹಂತದ ಜನಪ್ರತಿನಿಧಿಗಳಿಗೆ ಅಭಿನಂದಿಸುವುದು, ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ, ಸಮಾಜದ ಬೆಳವಣಿಗೆ ಕುರಿತು ಸಂವಾದ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪಿಎಚ್‌ಡಿ ಪದವೀಧರರು ಮತ್ತು ಐಎಎಸ್, ಕೆಎಎಸ್ ಸಾಧಕರಿಗೆ ಸನ್ಮಾನ, ವೈದ್ಯಕೀಯ ಪದವಿಯನ್ನ ಪೂರೈಸಿದವರಿಗೆ ಅಭಿನಂದನೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಉತ್ಸವವೇ ರಾಷ್ಟ್ರೀಯ ಭೋವಿ ಜನೋತ್ಸವ. ಇದು ಭೋವಿ ಸಮುದಾಯದಲ್ಲಿ ಇನ್ನಷ್ಟು ಪ್ರೇರಕ ಶಕ್ತಿಯಾಗಿ ಬೆಳವಣಿಗೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವೀರಭದ್ರಪ್ಪ ಪೂಜಾರಿ, ಕೆ.ಹರ್ಷ ಭೋವಿ, ತಿಮ್ಮರಾಜು, ಕೃಷ್ಣಪ್ಪ, ಮಾರಪ್ಪ, ಜಗದೀಶ್, ಸಂತೋಷ್ ಹೊಳಲೂರು, ಕೌಶಿಕ್, ವೀರೇಶ್ ಕ್ಯಾತಿನಕೊಪ್ಪ ಮುಂತಾದವರು ಇದ್ದರು.

-----------------------------ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿದರು.

-----------------------------ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿದರು.