ಸಾರಾಂಶ
ಶಿವಾನಂದ ಗೊಂಬಿ ಹುಬ್ಬಳ್ಳಿ
ಉತ್ತರ ಕರ್ನಾಟಕದ ಆರಾಧ್ಯ ದೈವ ಇಲ್ಲಿನ ಶ್ರೀ ಸಿದ್ಧಾರೂಢ ಅಜ್ಜನ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿದೆ. ಆದರೆ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕಾದ ಮಹಾನಗರ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯಂತೂ ಇದಕ್ಕೂ ತನಗೂ ಯಾವುದೇ ಸಂಬಂಧವೇ ಇಲ್ಲವೆಂಬಂತಿದೆ.ಸಿದ್ಧಾರೂಢ ಮಠದ ಜಾತ್ರೆಯೆಂದರೆ ಶಿವರಾತ್ರಿ ಹಾಗೂ ಅದರ ಮರುದಿನ ನಡೆಯುವ ಜಾತ್ರೆಗೆ ಕನಿಷ್ಠವೆಂದರೆ 4-5 ಲಕ್ಷ ಜನ ಸೇರುವುದು ಮಾಮೂಲಿ. ಗೋವಾ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತಸಾಗರ ಹರಿದು ಬಂದಿದೆ. ಎಷ್ಟೋ ಜನ ಭಕ್ತರು ಎಲ್ಲಿ ಜಾಗ ಸಿಗುತ್ತದೆಯೋ ಅಲ್ಲೇ ಮಲಗುತ್ತಾರೆ. ಮತ್ತೊಂದು ಹಗಲಿರುಳು ಎನ್ನದೇ ಭಜನೆಯಲ್ಲೇ ಕಾಲ ಕಳೆಯುತ್ತದೆ. ಅಜ್ಜನ ಮಠಕ್ಕೆ ಬಂದವರಿಗೆ ನಿದ್ದೆಯ ಚಿಂತೆ ಇಲ್ಲ. ಊಟದ ಪರಿವೇ ಇಲ್ಲ ಎಂಬಂತೆ ಇರುತ್ತಾರೆ.
ಸ್ವಚ್ಛತೆಯ ಕೊರತೆ: ಭಕ್ತರಿಗೆ ಸಂಘ ಸಂಸ್ಥೆಗಳು ಫುಲಾವ್, ಮೊಸರನ್ನ, ಉಪ್ಪಿಟ್ಟು ಸೇರಿದಂತೆ ವಿವಿಧ ಪದಾರ್ಥಗಳನ್ನು ಪೇಪರ್ ಪ್ಲೇಟ್‌ನಲ್ಲಿ ನೀಡುತ್ತಾರೆ. ಅದನ್ನೆಲ್ಲ ತೆಗೆದುಕೊಂಡು ಹೋಗಿ ಸ್ವಚ್ಛತೆ ಕಾಪಾಡಲು ಏನು ವ್ಯವಸ್ಥೆ ಬೇಕೋ ಅದನ್ನು ಮಾಡುವ ಗೋಜಿಗೆ ಪಾಲಿಕೆ ಹೋಗುತ್ತಿಲ್ಲ. ಹೀಗಾಗಿ ರಸ್ತೆಯೆಲ್ಲೆಲ್ಲ ನೀಡಿದ ಪ್ರಸಾದದ ಬಿದ್ದಿರುತ್ತದೆ. ಹಾಗಂತ ಪಾಲಿಕೆಯೇನೂ ಮಾಡಿಯೇ ಅಂತೇನೂ ಇಲ್ಲ. ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ಆದರೆ ಅವುಗಳು ತುಂಬಿ ತುಳುಕುತ್ತಿವೆ. ಅದರಲ್ಲಿನ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗುತ್ತಿಲ್ಲವಷ್ಟೇ.ಮೊಬೈಲ್ ಟಾಯ್ಲೆಟ್ ಇಲ್ಲ: ಇನ್ನು ಎಲ್ಲರಿಗೂ ಸ್ನಾನದ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲದ ಮಾತು. ಅದನ್ನು ಮಾಡಬೇಕೆಂದು ಯಾರೂ ಬಯಸುವುದೂ ಇಲ್ಲ. ಆದರೆ ಕನಿಷ್ಠ ಪಕ್ಷ ಮೊಬೈಲ್ ಟಾಯ್ಲೆಟ್‌ನ ವ್ಯವಸ್ಥೆಯನ್ನಾದರೂ ಪಾಲಿಕೆ ಮಾಡಿದರೆ ಭಕ್ತರಿಗೆ ನೆರವಾದರೂ ಆಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬನ ಅವಶ್ಯಕತೆ ಬರುವುದೇ ಟಾಯ್ಲೆಟ್. ಹೀಗೆ ಸೇರಿರುವ ಲಕ್ಷಾಂತರ ಭಕ್ತ ಗಣ ಎಲ್ಲಿಗೆ ಹೋಗಬೇಕು. ಮಠ ಏನಾದರೂ ಊರ ಹೊರಗೆ ಇದ್ದರೆ ಎಲ್ಲೋ ಬಹಿರ್ದೇಶೆಗಾದರೂ ಹೋಗಬಹುದು. ಇಲ್ಲಿ ಮಠದ ಸುತ್ತಲೂ ಜನವಸತಿಯೇ ಇದೆ. ಹೀಗಾಗಿ ಎಲ್ಲಿ ಹೋಗಬೇಕೆಂಬುದೇ ತಿಳಿಯದಂತಹ ಪರಿಸ್ಥಿತಿ ಇಲ್ಲಿನ ಭಕ್ತಗಣದ್ದು.
ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡಿ ಎಂಬ ಬೇಡಿಕೆಯನ್ನು ಮಠದ ಟ್ರಸ್ಟ್ ಕಮಿಟಿ ಪಾಲಿಕೆಯ ಮುಂದೆ ಇಟ್ಟಿತ್ತು. ಆದರೆ ಮಹಾನಗರ ಪಾಲಿಕೆ ಮೊಬೈಲ್ ಟಾಯ್ಲೆಟ್ ಕಳುಹಿಸಿಲ್ಲ. ಇನ್ನು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮೂರು ಮೊಬೈಲ್ ಟಾಯ್ಲೆಟ್ ಇಡಲಾಗಿದೆ ಎಂದು ಹೇಳುತ್ತಾರೆ. ಆದರೆ ಮಠದ ಸುತ್ತಮುತ್ತಲೂ ಒಂದೇ ಒಂದು ಸಂಚಾರಿ ಪಾಯಖಾನೆ ಕಾಣಸಿಗುತ್ತಿಲ್ಲ.ಆರೋಗ್ಯ ಸ್ಥಾಯಿ ಸಮಿತಿ: ಇನ್ನು ಆರೋಗ್ಯ ಸ್ಥಾಯಿ ಸಮಿತಿಗಂತೂ ಜಾತ್ರೆಗೂ ತಮಗೂ ಏನು ಸಂಬಂಧವೇ ಇಲ್ಲ ಎಂಬಂತೆ ಇದೆ. ಊರಲ್ಲಿ ಇಷ್ಟೊಂದು ದೊಡ್ಡ ಜಾತ್ರೆ ನಡೆಯುತ್ತದೆ. ಲಕ್ಷಗಟ್ಟಲೇ ಜನ ಸೇರುತ್ತಾರೆ. ಮಠದ ಟ್ರಸ್ಟ್ ಕಮಿಟಿ ಜತೆಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಲಿ, ಪಾಲಿಕೆ ಸಿಬ್ಬಂದಿಗಳಾಗಲಿ ಒಂದೇ ಒಂದು ಸಭೆ ನಡೆಸಿಲ್ಲ. ಕನಿಷ್ಠಪಕ್ಷ ಮಠದವರು ಕೇಳಿರುವ ಸೌಲಭ್ಯ ಕಲ್ಪಿಸುವ ಪ್ರಯತ್ನವನ್ನೂ ಮಾಡಿಲ್ಲ.
ಇನ್ನು ಮಹಾನಗರದ ಪ್ರಥಮ ಪ್ರಜೆ ಮೇಯರ್ ಅವರಂತೂ ಪಾಲಿಕೆ ಸಾಮಾನ್ಯಸಭೆಯಲ್ಲೇ ಮೌನಗೌರಿಯಂತೆ ಇರುತ್ತಾರೆ. ಮಠದ ವಿಷಯದಲ್ಲೂ ಹಾಗೆ ಉಳಿದಿದ್ದಾರೆ. ಅವರೂ ಮಠದ ಜಾತ್ರೆಯಲ್ಲಿ ಪಾಲಿಕೆ ಏನೇನು ಕ್ರಮ ಕೈಗೊಂಡಿದೆ ಎಂಬುದನ್ನು ಕೇಳುವ ಗೋಜಿಗೆ ಹೋಗಿಲ್ಲ.ಇನ್ನು ಒಂದು ವಾರ ಮಠದ ಜಾತ್ರೆ ನಡೆಯುತ್ತಿದೆ. ಇನ್ನಾದರೂ ಪಾಲಿಕೆ ಎಚ್ಚೆದ್ದು ಮೊಬೈಲ್ ಟಾಯ್ಲೆಟ್, ಡಸ್ಟ್‌ಬಿನ್ ಇಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಿ ಸ್ವಚ್ಛತೆಗೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಅಜ್ಜನ ಸೇವೆಯನ್ನು ಪಾಲಿಕೆ ಮಾಡಬೇಕು ಎಂಬುದು ಭಕ್ತ ಗಣದ ಒಕ್ಕೊರಲಿನ ಆಗ್ರಹ.