ಕನ್ನಡಪ್ರಭ ವಾರ್ತೆ ನಾಗಮಂಗಲ
ಸೇವಾ ನಿವೃತ್ತಿಯಾದ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಸಿದ್ದೇಗೌಡರು ಅಂಚೆ ಇಲಾಖೆಗೆ ಬಹುದೊಡ್ಡ ಆಸ್ತಿ ಮತ್ತು ಜನಸ್ನೇಹಿ ಆಡಳಿತ ನೀಡಿರುವ ಆದರ್ಶ ವ್ಯಕ್ತಿ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಎಂ.ಡಿ.ಆಕಾಶ್ ಬಣ್ಣಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ತಾಲೂಕು ಕೇಂದ್ರದ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುವುದು ಸುಲಭವಲ್ಲ. ಆದರೆ, ಸಿದ್ದೇಗೌಡರು ಒಂದು ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಉತ್ತಮ ಸಾಧನೆಯೊಂದಿಗೆ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಸಿದ್ದೇಗೌಡರು ಯಾವೊಂದು ಕಡತಗಳನ್ನು ಬಾಕಿ ಉಳಿಸಿಕೊಳ್ಳದೆ ಸಕಾಲದಲ್ಲಿ ವಿಲೇವಾರಿ ಮಾಡುತ್ತಿದ್ದರು, ಉತ್ತಮ ವ್ಯವಹಾರ ಮಾಡುವ ಮೂಲಕ ಇಲಾಖೆ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರಲ್ಲಿದ್ದ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಇಲಾಖೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ಇತರೆ ಸಿಬ್ಬಂದಿ ಕಲಿಯಬೇಕಿದೆ ಎಂದು ತಿಳಿಸಿದರು.ಸಿದ್ದೇಗೌಡರ ನಿವೃತ್ತಿ ಜೀವನ ಸುಖಕರವಾಗಿರಲಿ, ಸೇವಾ ನಿವೃತ್ತಿ ನಂತರ ಮನೆಯಲ್ಲಿ ಕೂರುವ ಬದಲು ಉತ್ತಮ ಆರೋಗ್ಯ ಕಾಪಾಡಿಕೊಂಡು ಕ್ಷೇತ್ರ ಅಧಿಕಾರಿಯಾಗಿ ಬಂದು ಅಂಚೆ ಇಲಾಖೆಗೆ ಮತ್ತಷ್ಟು ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಅಂಚೆ ಅಧಿಕಾರಿ ರಾಜು ಕಾಳೇಶ್ವರ್ ಮಾತನಾಡಿ, ಸಿದ್ದೇಗೌಡ ಅವರ ಕಾರ್ಯತಂತ್ರ ಮತ್ತು ಪರಿಶ್ರಮದಿಂದಾಗಿ ಕಳೆದ ನವೆಂಬರ್ ತಿಂಗಳಲ್ಲಿ ಖಾತೆ ತೆರೆಯುವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ನಂಬರ್ ಒನ್ ಆಗಿ, ನಮ್ಮ ಅಂಚೆ ಕಚೇರಿ ಪ್ರಥಮ ಸ್ಥಾನ ಪಡೆದುಕೊಂಡಿತು ಎಂದು ಶ್ಲಾಘಿಸಿದರು.
ಸಿದ್ದೇಗೌಡರ ಪುತ್ರಿ ಮಧುಶ್ರೀ ಮಾತನಾಡಿ, ತಂದೆ ಅವರ ಸಾಧನೆ ಕೇಳಿ ಬಹಳ ಖುಷಿಯಾಯಿತು. ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಮಾನವೀಯತೆಯಿಂದ ಜನಮನ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಿದ್ದೇಗೌಡರಿಗೆ ಮಾಶಾಸನ ಮಂಜೂರಾತಿ ಪತ್ರ ನೀಡಿ ಗೌರವಿಸಲಾಯಿತು.
ಅಂಚೆ ಅಧಿಕಾರಿಗಳಾದ ನಾಗರಾಜು, ಶಿವಣ್ಣ, ವೈ.ಪಿ.ಭೋವಿ ಮಾತನಾಡಿದ ನಂತರ ಅಂಚೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಹಿತೈಷಿಗಳು ಸಿದ್ದೇಗೌಡ ದಂಪತಿಯನ್ನು ಸನ್ಮಾನಿಸಿದರು. ಅಂಚೆ ಕಚೇರಿ ಅಧಿಕಾರಿಗಳಾದ ನಾಗೇಂದ್ರ, ರಾಮಣ್ಣ, ಜಿ.ಬಿ.ಶಿವಣ್ಣ, ಶ್ರೀಕಾಂತ್, ತಿಮ್ಮರಾಯಿಗೌಡ, ಸಿದ್ದೇಗೌಡರ ಪತ್ನಿ ಸರಸ್ವತಿ, ಪುತ್ರ ಹಿತೇಶ್‌ಗೌಡ, ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳ ಸಿಬ್ಬಂದಿ ಇದ್ದರು.