ಪುಷ್ಪಪ್ರದರ್ಶನಕ್ಕೆ ಸಿದ್ಧಗಂಗಾಶ್ರೀ ಭೇಟಿ; ಬಸವಣ್ಣನ ಜೀವನ ರೂಪಿಸಿರುವುದಕ್ಕೆ ಮೆಚ್ಚುಗೆ

| Published : Jan 25 2024, 02:03 AM IST

ಪುಷ್ಪಪ್ರದರ್ಶನಕ್ಕೆ ಸಿದ್ಧಗಂಗಾಶ್ರೀ ಭೇಟಿ; ಬಸವಣ್ಣನ ಜೀವನ ರೂಪಿಸಿರುವುದಕ್ಕೆ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪುಷ್ಪಪ್ರದರ್ಶನಕ್ಕೆ ಸಿದ್ಧಗಂಗಾಶ್ರೀ ಭೇಟಿ; ಬಸವಣ್ಣನ ಜೀವನ ರೂಪಿಸಿರುವುದಕ್ಕೆ ಮೆಚ್ಚುಗೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರವು ಜಾತಿ ಜನಗಣತಿ ವರದಿ ಸ್ವೀಕರಿಸಿ ಬಿಡುಗಡೆ ಮಾಡಲಿ. ಅಲ್ಲಿಯವರೆಗೂ ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿದರು.

ಬುಧವಾರ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ 215ನೇ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ವಿಶ್ವಗುರು ಬಸವಣ್ಣನಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜನವರಿ ಅಂತ್ಯದೊಳಗೆ ಜಾತಿ ಜನಗಣತಿ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿರುವುದು ಒಳ್ಳೆಯದು. ಆಯೋಗವು ಸರ್ಕಾರ ಮೊದಲು ವರದಿ ಸಲ್ಲಿಕೆ ಮಾಡಲಿ. ಆ ನಂತರ ಸರ್ಕಾರ ಆ ವರದಿ ಬಿಡುಗಡೆ ಮಾಡಬೇಕಿದೆ. ಆ ವರದಿಯಲ್ಲಿ ಯಾವ ಅಂಶಗಳು ಇವೆ ಎಂಬುದು ಗೊತ್ತಿಲ್ಲ. ವರದಿ ಬಿಡುಗಡೆಗೆ ಕೆಲವೊಂದು ತಾಂತ್ರಿಕ ದೋಷಗಳು ಇವೆ ಎನ್ನಲಾಗುತ್ತಿದ್ದು, ಈಗಲೇ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಪುಷ್ಪ ಪ್ರದರ್ಶನಕ್ಕೆ ಮೆಚ್ಚುಗೆ:

ಬೆಂಗಳೂರಿನ ಲಾಲ್‌ಬಾಗ್‌ಗೆ ನೂರಾರು ವರ್ಷಗಳ ದೊಡ್ಡ ಇತಿಹಾಸವಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕಾಗಿ ಲಕ್ಷಾಂತರ ಜನರು ಕಾಯುತ್ತಿರುತ್ತಾರೆ. ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವಿಶ್ವಗುರು ಬಸವಣ್ಣ ಅವರ ಜನ್ಮಸಾಧನೆ ವಿಷಯಾಧಾರಿತವಾಗಿ ರೂಪಿಸಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಾದಿ ಶರಣರನ್ನು ಕೇಂದ್ರವಾಗಿಟ್ಟುಕೊಂಡು, ಅವರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನವನ್ನು ತೋಟಗಾರಿಕೆ ಇಲಾಖೆ ಮಾಡಿರುವುದು ಖುಷಿಯ ವಿಚಾರ ಎಂದ ಶ್ರೀಗಳು, ನಮ್ಮ ಬೆಂಗಳೂರಿನ ಲಾಲ್‌ಬಾಗ್‌ ನಮ್ಮ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಿದ್ಧಲಿಂಗ ಸ್ವಾಮೀಜಿ ಅವರನ್ನು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ। ಎಂ.ಜಗದೀಶ್‌ ಅವರು ಸನ್ಮಾನಿಸಿದರು.