ಕನ್ನಡಪ್ರಭ ವಾರ್ತೆ ತುಮಕೂರು
ಐತಿಹಾಸಿಕ ಪ್ರಸಿದ್ಧ ಸಿದ್ಧಗಂಗೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಶ್ರೀಕ್ಷೇತ್ರ ಸಿದ್ಧಗಂಗೆಯ ಆರಾಧ್ಯದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸೋಮವಾರ ಮಧ್ಯಾಹ್ನ ೧೨ಕ್ಕೆ ಸರಿಯಾಗಿ ಶುಭ ಅಭಿಜಿನ್ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಧ್ಯು ಕ್ತ ಚಾಲನೆ ನೀಡಿದರು.
ರಥೋತ್ಸವದಲ್ಲಿ ಶ್ರೀಕ್ಷೇತ್ರದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ್, ಪಾಲಿಕೆ ಆಯುಕ್ತೆ ಶುಭ, ವಿವಿಧ ಮಠಾಧೀಶರು ಸೇರಿದಂತೆ ಅನೇಕ ಗಣ್ಯರು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು.ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ಸಹ ಮಾಡಲಾಯಿತು.
ರಥವನ್ನು ಅಭೂತಪೂರ್ಣ ವಸ್ತ್ರಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.
ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು.
ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳು ಭಾನುವಾರ ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದು ಸೋಮವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ಶ್ರೀಕ್ಷೇತ್ರದಲ್ಲಿಂದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಭಕ್ತಾದಿಗಳು ಶ್ರೀಮಠದ ಶಾಲಾ ಕಟ್ಟಡಗಳ ಮೇಲೆ ಹತ್ತಿ ರಥೋತ್ಸವವನ್ನು ವೀಕ್ಷಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಹಲವು ಸಂಘ ಸಂಸ್ಥೆಗಳಿಂದ ಪಾನಕ, ಮಜ್ಜಿಗೆ, ಹೆಸರು ಬೇಳೆ ವಿತರಿಸಲಾಯಿತು. ರಥೋತ್ಸವದಲ್ಲಿ ನಾಡಿನ ವಿವಿಧೆಡೆಯಿಂದ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಭಕ್ತಾದಿಗಳಿಗೆ ವಿಶೇಷ ಪ್ರಸಾದ, ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವದಲ್ಲಿ ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ. ಎಸ್. ಪರಮೇಶ್ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.