ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಜಗತ್ತಿನ ಎಲ್ಲ ಸಿದ್ಧಾಂತಗಳಿಗೂ ಸಿದ್ಧಾಂತ ಶಿಖಾಮಣಿಯೇ ಕಿರೀಟಪ್ರಾಯವಾಗಿದೆ. ಇದೇ ಕೇವನ ವೀರಶೈವ ಲಿಂಗಾಯತರ ಧರ್ಮ ಗ್ರಂಥವಷ್ಟೇ ಅಲ್ಲ ಇಡೀ ಮಾನವ ಕುಲದ ಧರ್ಮಗ್ರಂಥ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಭಾನುವಾರ ಇಲ್ಲಿನ ಬೆಲ್ದಾಳೆ ಕನ್ವೆಶನ್ ಸಭಾಂಗಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಶಿವ ದರ್ಶನ ಸಂಚಾರ, ವೀರಶೈವ ಲಿಂಗಾಯತ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಅಭಿಯಾನ ಸಮಾರೋಪ ಹಾಗೂ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಭಗವಂತನ ಸಾಕ್ಷಾರಕ್ಕೆ ಸಮನ್ವಯವನ್ನು ಸಿದ್ಧಾಂತ ಶಿಖಾಮಣಿ ಪ್ರತಿಪಾದನೆ ಮಾಡುತ್ತದೆ.
ಜ್ಞಾನ ಮತ್ತು ಕರ್ಮವನ್ನು ಆಶ್ರಯಿಸಿಕೊಳ್ಳುವವನೇ ಭಗವತ್ ಸಾಕ್ಷಾಕಾರವನ್ನು ಪಡೆಯುತ್ತಾನೆ. ಇಂಥ ಅನೇಕ ಸಮನ್ವಯಗಳನ್ನು ಮಾಡುವದೇ ಸಿದ್ಧಾಂತ ಶಿಖಾಮಣಿ ಆಗಿದೆ. ಕೆಲವರು ತಮ್ಮ ಮೂಗಿನ ನೇರವಾಗಿ ಮಾತನಾಡುವವರಿಗೆ ಈ ಗ್ರಂಥದ ಗಂಧ ಗಾಳಿ ಗೊತ್ತಿಲ್ಲ ಎಂದು ಅರ್ಥೈಸಿಕೊಳ್ಳಬೇಕು. ಧರ್ಮ, ಅದರ ಸಿದ್ಧಾಂತಕ್ಕಾಗಿ ಶ್ರಮಿಸುತ್ತಿರುವ ರಾಜಶೇಖರ ಶಿವಾಚಾರ್ಯರ ಶ್ರಮ ಕಾರ್ಯಕ್ರಮದ ಸಮಾರೋಪದ ಅದ್ಭುತ ಯಶಸ್ವಿಗೆ ಸಾಕ್ಷಿಯಾಗಿದೆ ಎಂದರು.ಸಿದ್ಧಾಂತ ಶಿಖಾಮಣಿ ತಿರಸ್ಕರಿಸುವವರು ಪೂರ್ಣ ಓದಿ:ಯಾವುದೇ ಗ್ರಂಥವನ್ನು ವರ್ಣಿಸುವಾಗ ಅಪೂರ್ಣ ಓದಿದ್ದರೂ ಸೈ ಆದರೆ ಅದನ್ನು ತಿರಸ್ಕರಿಸುವ ಮೊದಲು ಪೂರ್ಣವಾಗಿ ತಿಳಿದುಕೊಳ್ಳಬೇಕು. ಸಿದ್ಧಾಂತ ಶಿಖಾಮಣಿಯನ್ನು ವಿರೋಧಿಸಿ ತಿರಸ್ಕರಿಸುವವರು ಮೊದಲು ಅದನ್ನು ಪೂರ್ಣವಾಗಿ ಓದಿ ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ.ಐವರಿಗೆ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ:
ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಖ್ಯಾತ ಚಲನಚಿತ್ರ ನಟ ನಿರ್ಮಾಪಕ ಹಾಗೂ ನಿರ್ದೇಶಕರಾದ ಡಾ. ಎಸ್. ನಾರಾಯಣ, ವೀರಶೈವ ಲಿಂಗಾಯತ ಮುಖಂಡರಾದ ರಾಜೇಶ್ವರ ನಿಟ್ಟೂರೆ ಉದಗೀರ, ವಿದೇಶಿ ವಾಣಿಜ್ಯೋದ್ಯಮಿದಾರರಾದ ಜಿ.ಟಿ ಸುರೇಶಕುಮಾರ ಅವರುಗಳಿಗೆ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಸಚಿವ, ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರಿಗೆ ಮನೆಗೆ ತೆರಳಿ ಗೌರವಿಸಿ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಲಾಗುವದು ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಿವಯ್ಯ ಸ್ವಾಮಿ ತಿಳಿಸಿದರು.ಬೆಮಳಖೇಡಾ-ಗೋರಟಾ ಹಿರೇಮಠದ ಪೀಠಾಧಿಪತಿಗಳಾದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗುರುಪಾದ ಶಿವಾಚಾರ್ಯರು ಹಿರೇಮಠ ಸಂಸ್ಥಾನ, ಬೇಮಳಖೇಡ, ವೀರಭದ್ರ ಶಿವಾಚಾರ್ಯರು ಸಾವಿರ ದೇವರ ಸಂಸ್ಥಾನ ಮಠ, ಬಿಚ್ಚಾಲಿ, ಕಡಗಂಚಿ ಗುರುಲಿಂಗ ಶಿವಾಚಾರ್ಯರು ಬೃಹನ್ಮಠ ಚಿಟಗುಪ್ಪ-ಚಾಂಗಲೇರ, ಶಿವಾನಂದ ಶಿವಾಚಾರ್ಯರು ಹಿರೇಮಠ ತಮಲೂರು, ಕರುಣಾದೇವಿ ಮಾತಾ ಶ್ರೀ ಅಕ್ಕಮಹಾದೇವಿ ಚೈತನ್ಯಪೀಠ, ಶ್ರೀಶೈಲಂ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಕಾರ್ಯಕ್ರಮದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಿವಶರಣಪ್ಪ ವಾಲಿ ಮೆರವಣಿಗೆಗೆ ಚಾಲನೆ ನೀಡಿದರು.
ನೌಬಾದ್‌ನ ಜ್ಞಾನ ಶಿವಯೋಗಾಶ್ರಮದ ಡಾ. ರಾಜಶೇಖರ ಶಿವಾಚಾರ್ಯರು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ವೈಜಿನಾಥ ಕಮಠಾಣೆ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ಉಪಾಧ್ಯಕ್ಷ ತರುಣ್ ಎಸ್ ನಾಗಮಾರಪಳ್ಳಿ, ಮೆರವಣಿಗೆ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ ಶೆಟಕಾರ್, ಕಾರ್ಯಾಧ್ಯಕ್ಷ ರಾಜಕುಮಾರ ಹೆಬ್ಬಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.