ಬಸವತತ್ವ ಪ್ರಸಾರಕ್ಕಾಗಿ ಸಿದ್ದರಾಮಣ್ಣ ಜೀವನ ಮುಡಿಪು

| Published : Aug 14 2024, 12:50 AM IST / Updated: Aug 14 2024, 12:51 AM IST

ಸಾರಾಂಶ

ಬೆಂಗಳೂರಿನ ವಿಕಾಸಸೌಧದಲ್ಲಿ ಬಸವತತ್ವ ಆರಾಧಕ ವಿ. ಸಿದ್ದರಾಮಣ್ಣ ಅವರ ಭಾವಚಿತ್ರಕ್ಕೆ ಸಚಿವ ಈಶ್ವರ ಖಂಡ್ರೆ ಪುಷ್ಪನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ:

ಬಸವತತ್ವ ಪ್ರಚಾರ ಪ್ರಸಾರಕ್ಕಾಗಿ ಶತಾಯಷಿ ವಿ.ಸಿದ್ದರಾಮಣ್ಣ ಅವರು ಜೀವನ ಮುಡಿಪಾಗಿಟ್ಟಿದ್ದರು. ಅವರ ಅಗಲಿಕೆ ನಾಡಿಗೆ ತುಂಬಲರಾದ ನಷ್ಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೆಂಗಳೂರಿನ ವಿಕಾಸ ಸೌಧದ ಅರಣ್ಯ ಇಲಾಖೆ ಕೊಠಡಿಯಲ್ಲಿ ಮಂಗಳವಾರ ವಿ.ಸಿದ್ದರಾಮಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಜಿಲ್ಲೆಯ ಮೂಲದವರಾಗಿದ್ದರೂ ಕೂಡ ವಿ.ಸಿದ್ದರಾಮಣ್ಣ ಶರಣರು ಬೀದರ್‌ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಚನ್ನಬಸವ ಪಟ್ಟದ್ದೇವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರು ಗಡಿ ಭಾಗದಲ್ಲಿ ಬಸವತತ್ವ ಪ್ರಚಾರ ಪ್ರಸಾರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಶತಾಯಷಿ ಡಾ.ಭೀಮಣ್ಣ ಖಂಡ್ರೆ ಅವರ ಜೊತೆಗೆ ವಿ. ಸಿದ್ದರಾಮಣ್ಣ ಅವರು ಕೈಜೋಡಿಸಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಮ್ಮೆಲ್ಲರಿಗೂ ಮಾರ್ಗದರ್ಶಕರೂ ಆಗಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ತೀವ್ರ ದುಃಖ ತರಿಸಿದೆ. ಕುಟುಂಬ ಸದಸ್ಯರಿಗೆ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಬಸವಣ್ಣನವರು ಕರುಣಿಸಲಿ ಎಂದು ಈಶ್ವರ ಖಂಡ್ರೆ ಪ್ರಾರ್ಥಿಸಿದರು. ಈ ವೇಳೆ ಶೇಖರಗೌಡ ರಾಮತನಾಳ, ಡಾ. ಕೆ.ಟಿ ತಿಪ್ಪೇಸ್ವಾಮಿ, ಪ್ರಭಾಕರ ಗೌಡ ಸೇರಿದಂತೆ ಹಲವರು ಇದ್ದರು.