ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸಿದ್ಧಾರೂಢರು ಭಗವಂತನ ಸಾಕ್ಷಾತ್ಕಾರದ ಪ್ರತಿರೂಪ. ಅವರು ಹುಟ್ಟಿನಿಂದಲೇ ಶಿವನ ಆಶೀರ್ವಾದ ಪಡೆದು ಜನಿಸಿದ ಮಹಾನ್ ಯೋಗಿಗಳು. ಸಿದ್ಧಾರೂಢರು ನಡೆದಾಡಿದ ಈ ಪುಣ್ಯ ಭೂಮಿಯಲ್ಲೇ ಅವರ ಅಂಚೆ ಚೀಟಿ ಬಿಡುಗಡೆಗೊಳಿಸುವ ಸೌಭಾಗ್ಯ ನನ್ನದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಶನಿವಾರ ಸಂಜೆ ಮಠದ ಆವರಣದಲ್ಲಿ ಸಿದ್ಧಾರೂಢ ಶ್ರೀಗಳ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂತ, ಮಹಾಂತರಿಂದಲೇ ಒಂದು ಊರಿಗೆ ಮಹತ್ವ ಬರುತ್ತದೆ. ಅಂತೆಯೇ ಸಿದ್ದಾರೂಢರ ಕಾರಣದಿಂದಲೇ ಹುಬ್ಬಳ್ಳಿ ದೇಶಾದ್ಯಂತ ಗುರುತಿಸಿಕೊಂಡಿದೆ. ಅವರ ಅಂಚೆ ಚೀಟಿ ಬಿಡುಗಡೆ ಬಹಳ ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಶ್ರೀಗಳ ಅನುಗ್ರಹದಿಂದ ಅಶ್ವಿನಿ ವೈಷ್ಣವ್ ಅವರ ಮುತುವರ್ಜಿಯಿಂದಾಗಿ ಇಂದು ಸಾಕಾರಗೊಂಡಿದೆ ಎಂದರು.ಶ್ರೀಮಠದಲ್ಲಿ ಪ್ರಸಾದ ನಿಲಯ ನಿರ್ಮಿಸಿಕೊಡುವಂತೆ ಮಠದ ಟ್ರಸ್ಟ್ ಕಮಿಟಿಯವರು ಮನವಿ ಮಾಡಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದಲ್ಲಿ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಅಪರೂಪದ ಕ್ಷೇತ್ರಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇದು ದೇಶದಲ್ಲಿ ಅಪರೂಪದ ಕ್ಷೇತ್ರ. ಜಾತಿ, ಮತ, ಪಂಥ ಹಾಗೂ ಧರ್ಮವನ್ನು ನೋಡದ ಮಠ. ಹೀಗಾಗಿಯೇ ದೇಶಾದ್ಯಂತ ಸಿದ್ಧಾರೂಢರ ಪ್ರಭಾವ ಹರಡಿದೆ. ಅವರ ಭಾವಚಿತ್ರವುಳ್ಳ ಅಂಚೆ ಚೀಟಿ ಬಿಡುಗಡೆಯಾಗಿದ್ದು ಸಂತಸದ ಸಂಗತಿ ಎಂದರು.ಯಾತ್ರಿ ನಿವಾಸ ಆಗಬೇಕು ಎಂಬುದು ಎಲ್ಲರ ಬಯಕೆ. ಇದನ್ನು ನೆರವೇರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಕೇಂದ್ರದ ಪ್ರಸಾದ ಯೋಜನೆಯಡಿ ಇದನ್ನು ಮಾಡಬಹುದಾಗಿದೆ. ಈ ಸಂಬಂಧ ಮಠದ ಟ್ರಸ್ಟ್ ಕಮಿಟಿ ಪ್ರಸ್ತಾವನೆ ಸಲ್ಲಿಸಿದರೆ ಶಿವರಾತ್ರಿ ವೇಳೆಗೆ ಅಡಿಗಲ್ಲು ಹಾಕಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಇದೊಂದು ಅವಿಸ್ಮರಣೀಯ ದಿನ. ಶುದ್ಧ ಅಂತಃಕರಣದ ಭಕ್ತಿ ಸ್ವರೂಪವೇ ಸಿದ್ದಾರೂಢರು. ಅವರ ಚಿಂತನೆ ಧರ್ಮದ ಚೌಕಟ್ಟಿನಿಂದ ಹೊರಗೆ ಇರುವಂತಹದ್ದು. ಪರಮಾತ್ಮ ನಮ್ಮ ಒಳಗಡೆ ಇದ್ದಾನೆ ಎಂದು ಹೇಳಿದವರೇ ಈ ಸಂತರು. ಸಾಧಕನಿಗೆ ಸಾವು ಅಂತ್ಯ ಅಲ್ಲ ಎಂಬುದನ್ನು ಶ್ರೀ ಸಿದ್ಧಾರೂಢರು ತೋರಿಸಿ ಕೊಟ್ಟಿದ್ದಾರೆ ಎಂದರು.ಮಠದ ಅಭಿವೃದ್ಧಿಗೆ ಶ್ರಮಿಸೋಣ
ಅಧ್ಯಕ್ಷತೆ ವಹಿಸಿದ್ದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಭಾರತದಲ್ಲಿ ಮಠಾಧೀಶರಿಲ್ಲದೇ ಟ್ರಸ್ಟ್ ಮೂಲಕವೇ ನಡೆಯುತ್ತಿರುವ ಮಠವೆಂದರೆ ಅದು ಸಿದ್ಧಾರೂಢರ ಮಠ. ಈ ಮಠದ ಉತ್ತರೋತ್ತರ ಅಭಿವೃದ್ಧಿಗೆ ಭಕ್ತರಾದ ನಾವೆಲ್ಲರೂ ಶ್ರಮಿಸಬೇಕಿದೆ. ಮಠ ಹೇಗಿರಬೇಕು ಎಂದರೆ ಅದು ಸಿದ್ಧಾರೂಢರ ಮಠದಂತೆ ಎಂಬ ಕಲ್ಪನೆಯಂತೆ ದೇಶಾದ್ಯಂತ ಹೆಸರಾಗಿಸಬೇಕು. ಟ್ರಸ್ಟ್ ನಿಂದ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಈಡೇರಿಸಲು ಬೇಕಾದ ಕಾರ್ಯ ಕೈಗೊಳ್ಳಲು ಪ್ರಾಮಾಣಿಕನಾಗಿ ಶ್ರಮಿಸುವುದಾಗಿ ತಿಳಿಸಿದರು.ಭಕ್ತರ ಮೇಲ್ಮನೆ ಸಭಾ ಅಧ್ಯಕ್ಷ ಡಿ.ಆರ್. ಪಾಟೀಲ, ಚೀಫ್ ಪೋಸ್ಟ್ ಮಾಸ್ಟರ್ ಎಸ್. ರಾಜೇಂದ್ರಕುಮಾರ ಮಾತನಾಡಿದರು. ಇಂಚಲದ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಶ್ರೀಗಳು, ಚಿಕ್ಕನಂದಿಯ ಸಿದ್ಧಾರೂಢ ಮಠದ ಸಹಜಯೋಗಿ ಸಹಜಾನಂದ ಶ್ರೀಗಳು, ಅಣ್ಣಿಗೇರಿಯ ಶಿವಕುಮಾರ ಶ್ರೀಗಳು, ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಎಂ.ಆರ್. ಪಾಟೀಲ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರಗಮ್ಮ ಬಿಜವಾಡ, ಪಾಲಿಕೆ ಸದಸ್ಯೆ ಮಂಗಳಾ ಗೌರಿ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಠದ ಟ್ರಸ್ಟ್ ಕಮೀಟಿ ಚೇರ್‌ಮನ್ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷ ಬಿ.ಆರ್. ಬಾಗೇವಾಡಿ, ಧರ್ಮದರ್ಶಿ ಶ್ಯಾಮಾನಂದ ಪೂಜಾರಿ, ಡಾ. ಗೋವಿಂದ ಮಣ್ಣೂರ, ಚೆನ್ನವೀರ ಮುಂಗಡವಾಡಿ, ಮಹೇಂದ್ರ ಸಿಂಘಿ ಸೇರಿದಂತೆ ಹಲವರಿದ್ದರು.