ಸಿದ್ದು ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಲ್ಲ

| Published : Apr 18 2024, 02:27 AM IST / Updated: Apr 18 2024, 09:33 AM IST

HD Kumaraswamy

ಸಾರಾಂಶ

ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅಂದರೆ, ಒಕ್ಕಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂಬುದು ಅವರ ಮಾತಿನ ಅರ್ಥ 

 ಮೈಸೂರು/ಮಂಡ್ಯ : ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಅಂದರೆ, ಒಕ್ಕಲಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂಬುದು ಅವರ ಮಾತಿನ ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಬುಧವಾರ ಸುದ್ದಿಗಾರರೊಡನೆ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಅಂದರೆ, ಒಕ್ಕಲಿಗರಿಗೆ ಅವರ ಪಕ್ಷದ ಸಿಎಂ ಅವರಿಂದಲೇ ಅನ್ಯಾಯವಾಗಿದೆ ಎನ್ನುವುದು ಶಿವಕುಮಾರ್ ಮಾತಿನ ಅರ್ಥ. ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಿಲ್ಲ. ಸಿಎಂ ಆಗಲು ತಮಗೆ ಅಡ್ಡಿಯಾಗುತ್ತಾರೆ ಎಂದು ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಎಂದು ಅವರು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದ ರಾಜಕೀಯದಿಂದ ದೂರ ಹೋಗದಿದ್ದರೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಈ ಹಿಂದೆ ಬೆದರಿಸಿದ್ದರು ಎಂದು ಅವರು ಹೇಳಿದರು.

ಈಗ ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್ ಆಗಿದ್ದೇನೆ. ರಾಹುಲ್ ಗಾಂಧಿ ಅವರ ಮುಕ್ಕಾಲು ಗಂಟೆ ಭಾಷಣದಿಂದ ರಾಜ್ಯದಲ್ಲಿ ಯಾವ ಪರಿವರ್ತನೆಯೂ ಆಗಲ್ಲ. ಮಂಡ್ಯದಲ್ಲಿ ನನ್ನ ಸೋಲು-ಗೆಲುವು ಡಿ.ಕೆ. ಶಿವಕುಮಾರ್ ಅವರ ಕೈಯ್ಯಲ್ಲಿ ಇದೆಯಾ?. ಹಣದ ದುರಹಂಕಾರ, ದರ್ಪದಿಂದ ನಾನು ಸೋಲ್ತಿನಿ ಅಂತಾ ಹೇಳ್ತಿದ್ದಾರೆ. ಆದರೆ, ಹಣದಿಂದ ಮಂಡ್ಯದ ಜನರನ್ನು ಕೊಂಡುಕೊಳ್ಳಲು ಆಗಲ್ಲ ಎಂಬುದು ಡಿಕೆಶಿಗೆ ತಿಳಿದಿರಲಿ ಎಂದು ಹೇಳಿದರು.ಕೆರೆಗೋಡಿಗೆ ಭೇಟಿ: ಮಂಡ್ಯ ತಾಲೂಕಿನ ಕೆರೆಗೋಡು ಹಾಗೂ ಮರಿಲಿಂಗನದೊಡ್ಡಿ ಗ್ರಾಮದಲ್ಲಿ ಬುಧವಾರ ಅವರು ಕೇಸರಿ ಶಾಲು ಧರಿಸಿ ಪಕ್ಷದ ಪರ ಪ್ರಚಾರ ನಡೆಸಿದರು. ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸ್ತಂಭ ನಿರ್ಮಾಣದ ಸಂದರ್ಭದಲ್ಲಿ ಪೊಲೀಸರು ಹಾಕಿರುವ ಅಮಾಯಕರ ಮೇಲಿನ ಕೇಸುಗಳನ್ನು ತೆಗೆಸುವುದು ತಮ್ಮ ಜವಾಬ್ದಾರಿ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕೇಸರಿ ಶಾಲಿನಲ್ಲಿ ಮಿಂಚಿದ ಎಚ್‌ಡಿಕೆ:

ಬುಧವಾರ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದ್ದ ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಗಮನ ಸೆಳೆದರು. ನಾನು ಮತ್ತು ನನ್ನ ಕುಟುಂಬ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾನು ಟೀಕಿಸಿದ್ದೇನೆಯೇ ಹೊರತು ನಮ್ಮ ತಾಯಂದಿರ ಬಗ್ಗೆ ಎಂದಿಗೂ ಲಘುವಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 1.05 ಲಕ್ಷ ಸಾವಿರ ಕೋಟಿ ರು. ಸಾಲ ಮಾಡಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ರಾಜ್ಯದ ಜನರ ತಲೆ ಮೇಲೆ ಸಾಲ ಹೊರಿಸಿದ್ದೆ ಸಾಧನೆಯಾಗಿದೆ ಎಂದು ದೂರಿದರು.ನಾನ್ಯಾಕೆ ಸ್ವಾಮೀಜಿ ಪೋನ್‌ ಟ್ಯಾಪ್‌ ಮಾಡಲಿ

ನಾನು ಏಕೆ ಆದಿ ಚುಂಚನಗಿರಿ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಲಿ?, ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ನಾನು ಏಕೆ ಅಮೆರಿಕಕ್ಕೆ ಹೋಗುತ್ತಿದ್ದೆ. ನಾನು ಯಾರ ಫೋನ್ ಅನ್ನು ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಾಮೀಜಿಯವರ ಪೋನ್‌ ಟ್ಯಾಪ್‌ ಮಾಡಲಾಗಿತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ 85ರಿಂದ 90 ರಷ್ಟು ಒಕ್ಕಲಿಗರರು ಬಿಜೆಪಿ-ಜೆಡಿಎಸ್‌ ಮೈತ್ರಿ ಪರ ಇದ್ದಾರೆ. ಇದು ಕಾಂಗ್ರೆಸ್‌ನವರ ಭಯಕ್ಕೆ ಕಾರಣವಾಗಿದೆ. ನಾನು ಏಕೆ ಸ್ವಾಮೀಜಿಯವರ ಫೋನ್ ಟ್ಯಾಪ್ ಮಾಡಲಿ?. ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ಯಾಕೆ ನಾನು ಅಮೆರಿಕಕ್ಕೆ ಹೋಗುತ್ತಿದ್ದೆ. ಯಾರೂ ನನಗೆ ಸರ್ಕಾರ ಬೀಳುತ್ತೆ ಅಂತಾ ಹೇಳಿರಲಿಲ್ಲ. ನೀವು ಅರಾಮಾಗಿ ಹೋಗಿ ಬನ್ನಿ ಅಂತಾ ಹೇಳಿ ಕಳುಹಿಸಿದ್ದರು. ನಾನು ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರ ಶುರುವಾದ 15 ದಿನಕ್ಕೆ ರಮೇಶ್ ಜಾರಕಿಹೊಳಿ, ಶಿವಕುಮಾರ್ ನಡುವೆ ಯಾರಿಗೋಸ್ಕರ ಕಲಹ ಆರಂಭವಾಯ್ತು ಎಂಬುದನ್ನು ಅವರು ಹೇಳಲಿ?. ಸರ್ಕಾರ ರಚನೆಯಾದ ಆರಂಭದಲ್ಲೇ ಅವರಿಬ್ಬರ ನಡುವೆ ಕಲಹ ಯಾಕೆ ಆಯ್ತು? ಎಂದು ಅವರು ಪ್ರಶ್ನಿಸಿದರು.ನನ್ನ ಮೇಲೆ 150 ಕೋಟಿ ರು. ಲಂಚದ ಆರೋಪ ಮಾಡಿದ ಜನಾರ್ಧನ ರೆಡ್ಡಿ ಬಗ್ಗೆಯೆ ತಲೆ ಕೆಡಿಸಿಕೊಳ್ಳಲಿಲ್ಲ. ಬೇರೆಯವರ ಫೋನ್‌ಗಳನ್ನು ನಾನು ಯಾಕೆ ಟ್ಯಾಪ್ ಮಾಡಲಿ. 1996ರಲ್ಲಿ ಚುನಾವಣೆಗೆ ನಿಂತಾಗ ಸಿಂಧ್ಯಾ ಅವರಿಗೆ ನಾನು ಕಪಾಳಮೋಕ್ಷ ಮಾಡಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ತರಹದ ರಾಜಕಾರಣ ಶಿವಕುಮಾರ್‌ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡೆ ಅವರು ರಾಜಕಾರಣ ಮಾಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

9ರ ಮಗುವನ್ನು ಅಪಹರಿಸಿ ಡಿಕೆಶಿ ಆಸ್ತಿ ಬರೆಸಿಕೊಂಡ್ರು: ಗೌಡ

ಅಮೆರಿಕದಲ್ಲಿ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿ, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟು, ನಂತರ ವ್ಯಕ್ತಿಯನ್ನು ಬೆದರಿಸಿ ಆತನ ಎಲ್ಲ ಆಸ್ತಿಯನ್ನು ಡಿಕೆಶಿಯವರು ಬರೆಸಿಕೊಂಡ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನನ್ನ ಎಲ್ಲಾ ಭೂವ್ಯವಹಾರಗಳ ಬಗ್ಗೆ ನನ್ನ ಬಳಿ ದಾಖಲೆಯಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ಧ ಅವರು ಕಿಡಿ ಕಾರಿದರು. ಅಮೆರಿಕದಲ್ಲಿ ಹಣ ಸಂಪಾದಿಸಿಕೊಂಡು ಬಂದ ವ್ಯಕ್ತಿಯೊಬ್ಬ ಬಿಡದಿ ಹತ್ತಿರ ರಸ್ತೆ ಪಕ್ಕದಲ್ಲಿ ಒಂದು ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದ್ದರು.

 ಆ ವ್ಯಕ್ತಿ ಸ್ಥಾಪನೆ ಮಾಡಿದ್ದ ಕಂಪನಿಯ ಆಸ್ತಿಗೆ ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡಿದ್ದರು. ಈ ಸುಳ್ಳು ಕ್ರಯ ಪತ್ರವನ್ನು ಆತನಿಗೆ ತೋರಿಸಿ, ಆತನಿಂದ ಆಸ್ತಿಯನ್ನು ಬರೆಸಿಕೊಂಡಿದ್ದರು. ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹೋಯಿತು. ಅಲ್ಲಿ ಇವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿಯ ಮಾಲೀಕನ 9 ವರ್ಷದ ಮಗಳನ್ನು ಕರೆದುಕೊಂಡು ಹೋಗಿ, ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇಟ್ಟು, ನಿನ್ನ ಮಗಳು ಬೇಕು ಅಂದರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳನ್ನು ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ.ಗಂಡ-ಹೆಂಡತಿ ಮಗುವಿನ ಬಳಿ ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟಿದ್ದ ಹೆಣ್ಣು ಮಗುವನ್ನು ಮುಂದೆ ಕರೆದುಕೊಂಡು ಬಂದು ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತದೆ. ಮತ್ತೆ ಆ ಮಗುವನ್ನು ಒಳಗೆ ತೆಗೆದುಕೊಂಡು ಹೋಗ್ತಾರೆ. ನಂತರ, ಆ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದ್ದಕ್ಕೆ 16 ಲಕ್ಷ ಹಾಗೂ 6 ಲಕ್ಷದ ಎರಡು ಚೆಕ್ ನೀಡಿದ್ದರು. ಆ ಎರಡೂ ಚೆಕ್‌ಗಳು ಬೌನ್ಸ್‌ ಆಗಿವೆ. ಇದನ್ನು ಪ್ರಶ್ನಿಸಿದ್ದಕ್ಕೆ, ಇದನ್ನು ಹೊರಗೆ ಹೇಳಿದ್ರೆ ಕಬ್ಬನ್ ಪಾರ್ಕ್ ನಲ್ಲಿ ಏನಾಗುತ್ತೆ ಅಂತಾ ತಿಳ್ಕೋ ಎಂದು ಆ ವ್ಯಕ್ತಿಗೆ ಬೆದರಿಸುತ್ತಾರೆ. ನಂತರ, ಆಸ್ತಿ ಕಳೆದುಕೊಂಡ ಆ ವ್ಯಕ್ತಿ ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡಿದರು. ಇವರು ಈಗ ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ... ಸೋನಿಯಾ, ರಾಹುಲ್ ಅವರಿಗೆ ಬಹಳ ಇಷ್ಟ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆಲ್ಲಾ ನನ್ನ ಬಳಿ ದಾಖಲೆ ಇದೆ. ಇದನ್ನು ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟಿದ್ದಾರೆ. ನಾನು ಅನ್ಯಾಯಕ್ಕೊಳಗಾದ ಆ ವ್ಯಕ್ತಿ ಬಳಿಗೆ ಹೋದಾಗ, ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನನ್ನ ಹೆಸರು ವೋಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು. ಈ ಘಟನೆ ನಡೆದು ಬಹಳ ವರ್ಷವಾಯ್ತು. ಹೀಗಾಗಿ, ಆಸ್ತಿ ಕಳೆದುಕೊಂಡ ಆ ವ್ಯಕ್ತಿಯ ಹೆಸರು ನನಗೆ ಮರೆತು ಹೋಗಿದೆ ಎಂದರು.