ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ಮೂರು ವರ್ಷ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಸಂಭ್ರಮಿಸಲು ತುಮಕೂರಿನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆ ಹಾಗೂ ಈಡೇರಿಸಿದ ಆಶ್ವಾಸನೆಗಳ ಕುರಿತ ರಿಪೋರ್ಟ್‌ ಕಾರ್ಡ್‌ ಸಹಿತ ಸಿದ್ದರಾಮಯ್ಯ ಅವರು ಜನರ ಎದುರು ನಿಲ್ಲಲಿದ್ದಾರೆ. ಮೂರು ವರ್ಷದ ಸಾಧನೆ, ಗ್ಯಾರಂಟಿಗಳ ಯಶಸ್ಸು, ಕಲ್ಯಾಣ, ಅಭಿವೃದ್ಧಿ ಜನಪರ ಕಾರ್ಯಕ್ರಮ ಹಾಗೂ ಜನಪರ ಆಡಳಿತದ ಕುರಿತು ಲೆಕ್ಕ ತೆರೆದಿಡಲಿದ್ದಾರೆ.

ದಾಖಲೆಯ ಬಜೆಟ್‌ ಮಂಡಿಸಿದ, ಸುದೀರ್ಘ ಮುಖ್ಯಮಂತ್ರಿ ದಾಖಲೆಯ, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಆಗಿ 8 ವರ್ಷ ಪೂರೈಸಿದ ಸಿದ್ದರಾಮಯ್ಯ ಅವರು ದಾಖಲೆ ಪ್ರಮಾಣದ ಫಲಾನುಭವಿಗಳಿಗೆ ಹಕ್ಕುಪತ್ರ ಸೇರಿ ವಿವಿಧ ಸೇವೆ ಸಮರ್ಪಿಸಲಿದ್ದಾರೆ. ಆ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದ ಸಾಧನೆಗಳೇನು? ಎದುರಿಸಿದ ಸವಾಲುಗಳೇನು? ಸಾಧನೆ ಸಂಭ್ರಮಿಸುವಂತಹ ದಾಖಲೆಗಳು ಯಾವುವು? ಸಿದ್ದರಾಮಯ್ಯ ಚುನಾವಣೆಗೆ ಮೊದಲು ನುಡಿದಿದ್ದೇನು ಹಾಗೂ ನಂತರ ನಡೆದಿದ್ದು ಹೇಗೆ? ಎಂಬಿತ್ಯಾದಿ ವಿವರಗಳು ಇಲ್ಲಿವೆ.


ನುಡಿದಂತೆ ನಡೆದ ಸರ್ಕಾರ:

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಮತ್ತು ‘ನುಡಿದಂತೆ ನಡೆಯುತ್ತೇವೆ’ ಎನ್ನುವುದನ್ನೇ ಧ್ಯೇಯವಾಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಮಾಡಿರುವ ಸಾಧನೆ ಹತ್ತು ಹಲವು.

ಪಂಚ ಗ್ಯಾರಂಟಿಗಳ ಯಶಸ್ವಿ ಅನುಷ್ಠಾನ ಮತ್ತು ಇಲಾಖಾವಾರು ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಜೊತೆ ಜೊತೆಗೆ ರಾಜ್ಯದ ವಿತ್ತೀಯ ಶಿಸ್ತು ಕಾಪಾಡಿಕೊಂಡು ಬರುತ್ತಿರುವುದೇ ಸಿದ್ದರಾಮಯ್ಯ ಸರ್ಕಾರದ ಅತಿದೊಡ್ಡ ಸಾಧನೆ ಎನ್ನುವುದು ತಜ್ಞರ ಅಭಿಪ್ರಾಯ ಮತ್ತು ಮೆಚ್ಚುಗೆ.

ಒಂದೆಡೆ ಹಿಂದಿನ ಸರ್ಕಾರದ ಅವಧಿಯಲ್ಲಿ ಹಳಿ ತಪ್ಪಿದ್ದ ರಾಜ್ಯದ ಆರ್ಥಿಕ ಶಿಸ್ತು, ಬಾಕಿ ಉಳಿದಿದ್ದ ಕೋಟ್ಯಂತರ ರು. ಕಾಮಗಾರಿ ಬಿಲ್‌ಗಳ ಮೊತ್ತ. ಕೇಂದ್ರ ಸರ್ಕಾರದಿಂದ ಬರಬೇಕಿರುವ ರಾಜ್ಯದ ಪಾಲಿನ ತೆರಿಗೆ, ಅನುದಾನದಲ್ಲಿ ಇಳಿಕೆ. ಇದೆಲ್ಲದರ ನಡುವೆ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವೇ ಇಲ್ಲ, ಜಾರಿ ಮಾಡಿದರೆ ಸರ್ಕಾರ ಪಾಪರ್‌ ಆಗೋದು ಗ್ಯಾರಂಟಿ ಎಂಬ ಪ್ರತಿಪಕ್ಷಗಳ ಟೀಕೆ.

ಇಷ್ಟೆಲ್ಲ ಸವಾಲು, ಟೀಕೆಗಳ ನಡುವೆಯೂ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರೆಸಿರುವುದು ಇಡೀ ದೇಶದ ಹುಬ್ಬೇರಿಸುವಂತೆ ಮಾಡಿದೆ. ಕಳೆದ ಎರಡು ವರ್ಷಗಳ ಆಡಳಿತದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿಎಸ್‌ಡಿಪಿಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ಆರ್ಥಿಕ ಶಿಸ್ತು ಪಾಲಿಸಿಕೊಂಡು ಬಂದಿರುವುದು ರಾಜ್ಯ ಸರ್ಕಾರದ ಗಮನಾರ್ಹ ಸಾಧನೆ.

ಬಡವರ ಆರ್ಥಿಕ ಸುರಕ್ಷಾ ಕವಚ: ಪಂಚಗ್ಯಾರಂಟಿ

ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳ ಮೂಲಕ ಈವರೆಗೆ 1.36 ಲಕ್ಷ ಕೋಟಿ ರು.ಗಳನ್ನು ನೇರವಾಗಿ ಫಲಾನುಭವಿಗಳಿಗೆ ಸಂದಾಯ ಮಾಡಿರುವುದು ಸಿದ್ದರಾಮಯ್ಯ ಸರ್ಕಾರದ ಬಹುದೊಡ್ಡ ಸಾಧನೆ. ಇಡೀ ವಿಶ್ವದಲ್ಲಿ ಆರ್ಥಿಕ ಸಂಕಷ್ಟ ನೆಲೆಸಿದ್ದು, ಮಧ್ಯಮವರ್ಗದವರೂ ಬಡತನದತ್ತ ಸಾಗುತ್ತಿರುವಾಗ ರಾಜ್ಯದಲ್ಲಿ ಮಾತ್ರ ತಲಾದಾಯ ಹೆಚ್ಚಾಗಿದೆ. ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಟದಿಂದ ತತ್ತರಿಸಿದವರಿಗೆ ಊರುಗೋಲಾಗಿವೆ. ತನ್ಮೂಲಕ ಬಡವರ ಪಾಲಿಗೆ ಆರ್ಥಿಕ ಸುರಕ್ಷಾ ಕವಚವಾಗಿ ಕೆಲಸ ಮಾಡುತ್ತಿದೆ.

ಪ್ರತಿ ವರ್ಷ ಒಂದು ಕುಟುಂಬಕ್ಕೆ ಕನಿಷ್ಠ 50,000 ರು.ಗಳಷ್ಟು ನೇರ ಲಾಭವನ್ನು ಪಂಚ ಗ್ಯಾರಂಟಿ ಯೋಜನೆಗಳು ತಂದಿತ್ತಿವೆ. ವಿಶ್ವಸಂಸ್ಥೆಯಿಂದ ಪ್ರಶಂಸೆಗೆ ಒಳಗಾದ ಯೋಜನೆಗಳು ದೇಶಾದ್ಯಂತ ಬಿಜೆಪಿ ಸೇರಿ ಎಲ್ಲಾ ಪಕ್ಷಗಳು ಕಾಪಿ ಮಾಡಿವೆ. ಆದರೆ, ಸಮರ್ಥವಾಗಿ ನಿಭಾಯಿಯಿಸಿದ ಕೀರ್ತಿ ಮಾತ್ರ ಸಿದ್ದರಾಮಯ್ಯ ಹೆಸರಿನಲ್ಲೇ ಅಚ್ಚಳಿಯದೆ ಉಳಿದಿದೆ.

ಬಡವರು ತಲೆ ಎತ್ತುವಂತೆ ಮಾಡಿದ ತಲಾದಾಯ:

ಗ್ಯಾರಂಟಿಗಳ ಪರಿಣಾಮ ಪರಿಣಾಮ ಅನೇಕ ಕುಟುಂಬಗಳ ಆರ್ಥಿಕ ಶಕ್ತಿಗೆ ಚೇತರಿಕೆ ಸಿಕ್ಕಿದೆ. ಕೊಂಚ ಸ್ಥಿತಿವಂತರ ಆರ್ಥಿಕತೆ ಇನ್ನಷ್ಟು ವೃದ್ಧಿಸುತ್ತಿದೆ. ಅಲ್ಲದೆ, ಜನರಲ್ಲಿ ಕೊಳ್ಳುವ ಶಕ್ತಿಯೂ ಹೆಚ್ಚಾಗಿದೆ. ಇದರ ಪರಿಣಾಮ ತೆರಿಗೆ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೂ ಅನುಕೂಲ ಮಾಡುತ್ತಿದೆ. ಬಡವರ ತಲಾದಾಯ ಹೆಚ್ಚಾಗಿದ್ದು ತಲೆ ಎತ್ತಿ ಓಡಾಡುವಂತಾಗಿದೆ. ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ ರಾಜ್ಯದ ಜನರ ತಲಾದಾಯ ದೇಶದಲ್ಲೇ ಹೆಚ್ಚು. ಇದು ಗ್ಯಾರಂಟಿಗಳ ಸಾಧನೆ ಎಂಬುದು ವಾಸ್ತವಿಕ ವಿಶ್ಲೇಷಣೆ.

ಸರ್ಕಾರವೇನು ಮಾಡಿದೆ ಎಂಬುದಕ್ಕೆ ಉತ್ತರ:

ಸರ್ಕಾರ ಮೂರು ವರ್ಷದಲ್ಲಿ ಜನಸಾಮಾನ್ಯರಿಗೆ ಏನು ಮಾಡಿದೆ ಎಂಬ ಪ್ರಶ್ನೆಗಳಿಗೆ ಉತ್ತರವೇ ತುಮಕೂರು ಸಮಾವೇಶ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸರ್ಕಾರ ಈಗಾಗಲೇ ವಿಜಯನಗರ ಜಿಲ್ಲೆ, ಹಾವೇರಿ ಜಿಲ್ಲೆಗಳಲ್ಲಿ ಈವರೆಗೂ ಇಂತಹದ್ದೇ ಸಮಾವೇಶಗಳ ಮೂಲಕ 13 ಲಕ್ಷ ಫಲಾನುಭವಿಗಳಿಗೆ ಸವಲತ್ತು ನೀಡಿರುವುದು ವಿಶೇಷ. ಇದೀಗ ತುಮಕೂರು ಸಮಾವೇಶದ ಮೂಲಕ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ, ನೇಮಕಾತಿ ಪತ್ರ, ಪಿಂಚಣಿ ಮತ್ತಿತರ ಸೇವೆ ಸಮರ್ಪಿಸಲಿದೆ.

ಜತೆಗೆ ಕಂದಾಯ ಇಲಾಖೆಯ ಜೊತೆಗೆ, ಗ್ರಾಮೀಣಾಭಿವೃದ್ದಿ ಇಲಾಖೆ, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳ ಸುಮಾರು 682 ಕೋಟಿ ರು. ವೆಚ್ಚದ ಅವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.ಅಭಿವೃದ್ಧಿ ಯೋಜನೆಗಳಿಗೆ ಭರಪೂರ ಅನುದಾನ:

ಗ್ಯಾರಂಟಿಗಳ ಯಶಸ್ವಿ ಜಾರಿ ಜೊತೆಗೆ ಮೂರು ವರ್ಷಗಳಲ್ಲಿ ಸುಮಾರು 1.60 ಲಕ್ಷ ಕೋಟಿ ರು.ಗಳಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳನ್ನೂ ಸರ್ಕಾರ ಕೈಗೊಂಡಿದೆ. 2023ರ ಮೇ 20ರಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊದಲ ಕ್ಯಾಬಿನೆಟ್‌ನಲ್ಲೇ ಕೆಲ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜೊತೆಗೆ ಆ ವರ್ಷದ ಒಂಬತ್ತು ತಿಂಗಳ ಆಡಳಿತದಲ್ಲೇ 21,168 ಕೋಟಿ ರು. ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಿತು. ನಂತರ 2024-25, 2025-26 ಹಾಗೂ ಪ್ರಸಕ್ತ 2026-27ನೇ ಸಾಲಿನಲ್ಲಿ ಅಭಿವೃದ್ಧಿಗೂ ಆದ್ಯತೆ ನೀಡಿ ಹಣ ಒದಗಿಸಲಾಗಿದೆ.

ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ, ಗ್ರಾಮೀಣ ರಸ್ತೆ, ಜಲಜೀವನ್‌ ಮಿಷನ್‌, ನೀರಾವರಿ ಯೋಜನೆಗಳು, ಕೆರೆಗಳ ಪುನಶ್ಚೇತನ, ಬೆಂಗಳೂರು ಮೂಲಸೌಕರ್ಯ ಸೇರಿ ಯಾವ ಕ್ಷೇತ್ರಕ್ಕೂ ಹಿನ್ನಡೆ ಉಂಟಾಗದಂತೆ ಅನುದಾನ ಒದಗಿಸಲಾಗಿದೆ.

ಕಂದಾಯ ಸೇವೆಗಳಿಗೆ ವೇಗ:

ಕಂದಾಯ ದಾಖಲೆ ಡಿಜಿಟಲೀಕರಣಕ್ಕೆ ವೇಗ ನೀಡಿದ್ದು, ಹತ್ತಾರು ವರ್ಷಗಳಿಂದ ಬಗೆಹರಿಯದ ಕಂದಾಯ ವ್ಯಾಜ್ಯಗಳಿಗೆ ಮುಕ್ತಿ ನೀಡಿದ್ದು. ಕಂದಾಯ ಗ್ರಾಮಗಳ ರಚನೆ, ಹಕ್ಕು ಪತ್ರ ವಿತರಣೆ. ತೆರಿಗೆ ಸಂಗ್ರಹದಲ್ಲೂ ಮುಂಚೂಣಿ, ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ. ಜತೆಗೆ ಅನ್ನದಾತರಿಗೆ ಮೂರು ವರ್ಷಗಳಲ್ಲಿ 1.40 ಲಕ್ಷ ಕೋಟಿ ರು. ಬಜೆಟ್‌, ರೈತರಿಗೆ 5 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲ, 20,000 ಕೋಟಿ ರು. ಪ್ರತಿ ವರ್ಷ ಹೊರೆ ಆದರೂ 7ನೇ ವೇತನ ಆಯೋಗ ಜಾರಿ, ಸರ್ಕಾರಿ ಶಾಲಾ-ಕಾಲೇಜುಗಳ ದುರಸ್ಥಿ ಹಾಗೂ ಹೊಸ ಶಾಲಾ-ಕಾಲೇಜು ಆರಂಭ, ಲಕ್ಷಾಂತರ ಕೋಟಿ ರು. ಬಂಡವಾಳ ಆಕರ್ಷಣೆ ಹೀಗೆ ಸಾಲು-ಸಾಲು ಸಾಧನೆಗಳನ್ನು ಸರ್ಕಾರ ಮುಡಿಗೇರಿಸಿಕೊಂಡಿದೆ.ಅಸಾಧ್ಯವಾದದ್ದನ್ನು ಸಾಧಿಸಿದ ಸಾಧಕ ಸಿಎಂ:ಹಲವರಿಂದ ಅಸಾಧ್ಯ ಹಾಗೂ ಜೇನುಗೂಡಿಗೆ ಕಲ್ಲು ಹಾಕಿದಂತೆ ಎಂದು ವ್ಯಾಖ್ಯಾನಿಸಲಾಗುತ್ತಿದ್ದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮರ್ಥವಾಗಿ ಜಾರಿ ಮಾಡಿದವರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಅಷ್ಟೇ ಅಲ್ಲದೆ ಜಾತಿವಾರು ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯೂ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಸಮೀಕ್ಷೆ ಪೂರ್ಣಗೊಂಡಿದ್ದು, ಅನುಷ್ಠಾನ ಮಾತ್ರ ಬಾಕಿದೆ. ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ-3ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾರ್ಯಕ್ಕೆ ಬೃಹತ್‌ ಪರಿಹಾರ ಒದಗಿಸಬೇಕಾದ ಹಿನ್ನೆಲೆಯಲ್ಲಿ ಯಾರೂ ಮುಂದೆ ಬರುತ್ತಿರಲಿಲ್ಲ. ಹೀಗಿರುವಾಗ ಹಲವು ವರ್ಷಗಳಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಇತಿ ಶ್ರೀ ಹಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಜತೆಗೆ, ಬೆಂಗಳೂರಿನಲ್ಲಿ ಸುರಂಗ ಮಾರ್ಗ, ಡಬಲ್‌ ಡೆಕ್ಕರ್‌ ರಸ್ತೆ, ರಿಂಗ್‌ ರಸ್ತೆ ಸೇರಿದಂತೆ ಬೃಹತ್‌ ಯೋಜನೆಗಳಿಗೆ ಸರ್ಕಾರ ಕೈ ಹಾಕಿದೆ. ಬಹುಮುಖ್ಯವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ಐದು ಪಾಲಿಕೆಗಳನ್ನು ರಚಿಸಲಾಗಿದೆ.

* ಗ್ಯಾರಂಟಿಗಳ ಸಾಧನೆ ವಿವರ:

ಗ್ಯಾರಂಟಿಗಳಿಗೆ ಸಿದ್ದರಾಮಯ್ಯ ಸರ್ಕಾರದ ವೆಚ್ಚ: 1.36 ಲಕ್ಷ ಕೋಟಿ ರು.

(ಯುವನಿಧಿ, ಗೃಹಲಕ್ಷ್ಮೀ ಬಾಕಿ ಪಾವತಿ ಬಿಟ್ಟು 1,34,688 ಕೋಟಿ ರು.)ಗೃಹ ಲಕ್ಷ್ಮೀ ಯೋಜನೆ:

ಫಲಾನುಭವಿಗಳ ಸಂಖ್ಯೆ: 1.24 ಕೋಟಿ

ಫಲಾನುಭವಿಗಳಿಗೆ ಸಂದಾಯವಾದ ಹಣ: 69,783 ಕೋಟಿ ರು.ಗೃಹಜ್ಯೋತಿ:

ಫಲಾನುಭವಿಗಳ ಸಂಖ್ಯೆ - 1.64 ಕೋಟಿ

ಏ.2026ರವರೆಗೆ ಆದ ವೆಚ್ಚ: 26,115 ಕೋಟಿ ರು.ಅನ್ನಭಾಗ್ಯ:

ಫಲಾನುಭವಿಗಳು - 1.17 ಕೋಟಿ ಕುಟುಂಬ

ಒಟ್ಟು ವೆಚ್ಚ: 18,897.21 ಕೋಟಿ ರು.* ಶಕ್ತಿ ಯೋಜನೆ:

726 ಕೋಟಿ ಬಾರಿ ಮಹಿಳೆಯರ ಉಚಿತ ಪ್ರಯಾಣ

ಒಟ್ಟು ವೆಚ್ಚ: 18,943 ಕೋಟಿ ರು.ಯುವನಿಧಿ ಯೋಜನೆ:

ಫಲಾನುಭವಿಗಳ ಸಂಖ್ಯೆ - 3.38 ಲಕ್ಷ

ಒಟ್ಟು ಅನುದಾನ ಬಿಡುಗಡೆ- 950 ಕೋಟಿ ರು.