ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗಟ್ಟಿಯಾಗಿಯೇ ಕುರ್ಚಿ ಮೇಲೆ ಕುಳಿತು, ಅಧಿಕಾರ ಮಾಡುತ್ತಿದ್ದಾರೆ. ಮುಂದೆಯೂ ಸಿಎಂ ಆಗಿಯೇ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗಟ್ಟಿಯಾಗಿಯೇ ಕುರ್ಚಿ ಮೇಲೆ ಕುಳಿತು, ಅಧಿಕಾರ ಮಾಡುತ್ತಿದ್ದಾರೆ. ಮುಂದೆಯೂ ಸಿಎಂ ಆಗಿಯೇ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.ನಗರದಲ್ಲಿ ನಿವೃತ್ತ ಎಸ್ಪಿ ಎನ್.ರುದ್ರಮುನಿ ಪುತ್ರನ ವಿವಾಹಕ್ಕೆ ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಲೂ ಸ್ಪಷ್ಟವಾಗಿಯೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಗಟ್ಟಿಯಾಗಿ ಸಿಎಂ ಆಗಿದ್ದು, ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿದು, ಅಧಿಕಾರ ಮಾಡುತ್ತಿದ್ದಾರೆ. ಮುಂದೆಯೂ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಸಿಎಂ ಆಗಿಯೇ ಮುಂದುವರಿಯುತ್ತಿದ್ದಾರೆ. ಸರ್ಕಾರದ ಮುಂದಾಗಲೀ, ಪಕ್ಷದ ಮುಂದಾಗಲಿ ಬೇರೆ ಯಾವುದೇ ಆಲೋಚನೆಗಳೂ ಇಲ್ಲ. ಪಕ್ಷದ ಮುಂದೆ ಬದಲಾವಣೆಯಂತಹ ವಿಷಯವೇ ಇಲ್ಲದಿದ್ದಾಗ ಅಂತೆ ಕಂತೆಗಳ ಬಗ್ಗೆ ಮಾತಾದರೂ ಯಾಕೆ ಎಂದು ಮರು ಪ್ರಶ್ನಿಸಿದರು.ಯಾರಿಗೂ, ಯಾವುದರ ಬಗ್ಗೆಯೂ ಗೊಂದಲ ಇರಬಾರದೆಂಬ ಕಾರಣಕ್ಕಾಗಿಯೇ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಾಗಲೀ, ಕುರ್ಚಿ ಕಿತ್ತಾಟವಾಗಲೀ ಇಲ್ಲ. ಹೈಕಮಾಂಡ್ ಏನು ಹೇಳುತ್ತದೋ, ಹಾಗೆಯೇ ಮಾಡಿ, ಐದು ವರ್ಷ ಕಾಲ ಸರ್ಕಾರವನ್ನು ನಡೆಸುತ್ತೇವೆ ಎಂದು ತಿಳಿಸಿದರು.
ಕ್ರಿಕೆಟ್‌ನಲ್ಲಿ ಆಡೋರೆ 11 ಜನ. ಯಾರು ಯಾರೋ ಬಂದು ಬ್ಯಾಟ್ ಬೀಸಿದರೆ ಅದಕ್ಕೆಲ್ಲಾ ಬೌಲಿಂಗ್ ಮಾಡುವುದಿಲ್ಲ. ಮಾತನಾಡೋರಿಗೆಲ್ಲಾ ಹೊಡೆಯೋದಕ್ಕೆ ಬಾಲ್ ಸಿಗುವುದಿಲ್ಲ. ಆ ಬೌಂಡರಿ ಅನ್ನೋದಿದೆಯಲ್ಲಾ, ಅದನ್ನು ಆಯ್ಕೆ ಮಾಡಿದ್ದು ಕರ್ನಾಟಕದ ಜನತೆ. ಆಯ್ಕೆಯಾದವರು ಶಾಸಕರು. ಸಿಎಂ-ಡಿಸಿಎಂ ಪರ ವಿವಿಧ ಮಠಾಧೀಶರು ಬ್ಯಾಟ್ ಬೀಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಕ್ರಿಕೆಟ್ ಆಟವನ್ನೇ ಉದಾಹರಿಸಿ, ಪ್ರತಿಕ್ರಿಯಿಸಿದರು.ನಮ್ಮ ಸರ್ಕಾರ ಐದು ವರ್ಷ ಸ್ಥಿರವಾಗಿರುತ್ತದೆ. ಮತ್ತೆ 2028ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿ ಬಹುಮತದಿಂದ ಗೆದ್ದು ಅಧಿಕಾರಕ್ಕೂ ಕಾಂಗ್ರೆಸ್ ಬರುತ್ತದೆ. ಸ್ವಾಮೀಜಿಗಳು ಏನೇನು ಹೇಳುತ್ತಾರೋ, ಅದೇ ಸ್ವಾಮೀಜಿಗಳನ್ನೇ ಕೇಳಿಕೊಳ್ಳಿ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ ಸಂವಿಧಾನ ಅಷ್ಟೇ ನಮಗೆ ಗೊತ್ತು. ದಲಿತರಿಗೆ ಶಕ್ತಿ ಬರಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ, ಕವಿತಾ ಚಂದ್ರಶೇಖರ ಇತರರು ಇದ್ದರು.ಹಳೆ ಮೀಸಲಾತಿಯಂತೆ ನೇಮಕಕ್ಕೆ ಸೂಚನೆ
ರಾಜ್ಯದಲ್ಲಿ ಕೆಎಟಿಯಿಂದ ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನು ಶೇ.56ರಷ್ಟು ಹೆಚ್ಚಿಸಿದ್ದರ ವಿರುದ್ಧ ತಡೆಯಾಜ್ಞೆ ತಂದಿದ್ದರು. ಈಗ ಹಳೆಯ ಮೀಸಲಾತಿಯಂತೆ ನೇಮಕಾತಿ ಮಾಡುವಂತೆ ತಿಳಿಸಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೀಗ ಹಳೆಯ ಮೀಸಲಾತಿಯಂತೆ ನೇಮಕಾತಿ ಮಾಡುವಂತೆ ಹೇಳಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲೇ ಐದಾರು ಸಾವಿರ ಹುದ್ದೆಗಳು ಖಾಲಿ ಇವೆ. ಹೊರ ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಮೇಣ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.ಇಲಾಖೆ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ಪೂರೈಸುತ್ತಿರುವ ಬಗ್ಗೆ ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ಜನರಲೈಸ್ಡ್ ಮಾಡುವುದಕ್ಕೆ ಆಗುವುದಿಲ್ಲ. ಕೆಲವೊಂದು ಕಡೆ ಇಂತಹ ಘಟನೆಗಳು ನಡೆದಿವೆ. ಮೆನು ಚಾರ್ಟ್ ಕಡ್ಡಾಯವಾಗಿ ಹಾಕುವಂತೆ ಸೂಚನೆ ನೀಡಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಟೆಂಡರ್‌ನಲ್ಲಿ ಗೋಲ್‌ಮಾಲ್ ನಡೆದಿದೆಯೆಂದು ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಇಲಾಖೆಯಲ್ಲಿ ಅಂತಹದ್ದೆಲ್ಲಾ ನಡೆದಿಲ್ಲ. ನಾನು ಅಧಿಕಾರ ವಹಿಸಿಕೊಂಡ ನಂತರ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದೇನೆ. ಯಾವುದೇ ಅವ್ಯವಹಾರ ನಡೆದಿಲ್ಲ.ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ.