ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ ಪಟ್ಟಣದಲ್ಲಿ ಐತಿಹಾಸಿಕ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿಹಬ್ಬಕ್ಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಿತು. ಸಿಡಿಹಬ್ಬದ ವಿಶೇಷವಾಗಿ ಪಟ್ಟಲದಮ್ಮ ಮತ್ತು ಹುಚ್ಚಮ್ಮ ತಾಯಿಗೆ ವಿವಿಧ ಹೂಗಳಿಂದ ಆಲಂಕರಿಸಿ ಮುಂಜಾನೆಯಿಂದಲೇ ಹೋಮ ಹವನ ಸೇರಿದಂತೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಭಕ್ತಿ ಪ್ರಧಾನವಾಗಿ ನಡೆಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಸಿದ್ದಾರ್ಥನಗರದ ನಿವಾಸಿಗಳು ಸಿಡಿ ಕಟ್ಟುವುದಕ್ಕಾಗಿ ಹಗ್ಗವನ್ನು ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ಹಗ್ಗವನ್ನು ನೀಡಿದರು. ತಂಬಡಹಳ್ಳಿ ಸೇರಿದಂತೆ ವಿವಿಧ ಗ್ರಾಮದ ರೈತರು ತಮ್ಮ ರಾಸುಗಳಿಗೆ ಹೂವು ಮತ್ತು ಬಲೋನ್‌ನಿಂದ ಶೃಂಗರಿಸಿ ಕೊಂಡಕ್ಕೆ ಸೌದೆಯನ್ನು ತಂದರು. ಮೆರವಣಿಗೆ ಮೂಲಕ ಬಂದ ಎತ್ತುಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿದರು. ಸಿಡಿ ಹಬ್ಬದ ಪ್ರಯುಕ್ತ ನಡೆಯುವ ಘಟ್ಟದ ಮೆರವಣಿಗೆಯು ಪೇಟೆ ಒಕ್ಕಲಿಗೇರಿ ಬೀದಿ, ಸಿದ್ದಾರ್ಥನಗರ, ಕೀರ್ತಿನಗರ, ಗಂಗಾಮತಸ್ಥ ಬೀದಿ, ಅಶೋಕ್‌ನಗರ ದೊಡ್ಡಪಾಲು, ಚಿಕ್ಕಪಾಲು, ಬಸವಲಿಂಗಪ್ಪನಗರ ಮಹಿಳೆಯರು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹೊಸ ಬಟ್ಟೆಯನ್ನು ತೊಟ್ಟ ಮಹಿಳೆಯರು ಘಟ್ಟ ಹೊತ್ತು ಮಂಗಳವಾಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಶಾಸಕರಿಂದ ಪೂಜೆ ಸಲ್ಲಿಕೆ :ಸಿಡಿಹಬ್ದದ ಆಕರ್ಷಕ ಕೇಂದ್ರಬಿಂದು ಘಟ್ಟ ಮೆರವಣಿಗೆಯಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಭಾಗವಹಿಸಿ ಪೂಜೆ ಸಲ್ಲಿಸಿ ಸಿಡಿಹಬ್ಬಕ್ಕೆ ಆಗಮಿಸಿದ್ದ ಭಕ್ತರಿಗೆ ಸಿಡಿ ಹಬ್ಬದ ಶುಭಾಶಯ ಕೋರಿದರು. ಆಟಿಕೆ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳು ಜಾತ್ರೆಯಲ್ಲಿ ಸುಲ್ತಾನ್ ರಸ್ತೆ ಮತ್ತು ಮದ್ದೂರು ಮಳವಳ್ಳಿ ರಸ್ತೆಯಯುದ್ದಕ್ಕೂ ವ್ಯಾಪಾರ ಚನ್ನಾಗಿಯೇ ನಡೆಯಿತು. ಪಟ್ಟಣದ ಆನಂತ್‌ರಾಂ ವೃತ್ತ, ಕುಪ್ಪಸ್ವಾಮಿ ಸರ್ಕಲ್, ಸೇರಿದಂತೆ ಮಳವಳ್ಳಿ-ಮೈಸೂರು ರಸ್ತೆ ಹಾಗೂ ಮಳವಳ್ಳಿ ಮದ್ದೂರು ಕೊಳ್ಳೇಗಾಲ ರಸ್ತೆಗಳಲ್ಲಿ ವಿಶೇಷ ರೀತಿಯ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು.ಘಟ್ಟ ಮೆರವಣಿಗೆಯಲ್ಲಿ ಯುವಕರು ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಪ್ರತಿ ಸಮುದಾಯದಿಂದ ಘಟ್ಟ ಮೆರವಣಿಗೆಗೆ ಒಂದೊಂದು ರೀತಿಯ ತಮಟೆ ವಾದ್ಯವನ್ನು ಕರೆತರಲಾಗಿತ್ತು. ಮೆರವಣಿಗೆಯಲ್ಲಿ ತಮ್ಮದೇ ವೈಶಿಷ್ಟದೊಂದಿಗೆ ಕುಣಿಯುವ ಮೂಲಕ ಹಬ್ಬಕ್ಕೆ ಬಂದಿದ್ದ ನೆಂಟರಿಗೆ ಉತ್ತಮ ಮನರಂಜನೆ ನೀಡಿದರು.
ಸಿಡಿಹಬ್ಬಕ್ಕೆ ತಾಲೂಕು ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಹಿತರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿಕ್ಯಾಮರಾ ಆಳವಡಿಸಲಾಗಿತ್ತು.