ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಸಮಾಜದ ಗಮನ ಸೆಳೆಯುವ ಉದ್ದೇಶದಿಂದ ಇದೇ ತಿಂಗಳು 28ರಂದು (ಶನಿವಾರ) ನಗರದ ಅರಸೀಕೆರೆಯಲ್ಲಿ ಮಹಿಳೆಯರಿಂದ ಮೌನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಮತಾ ಶಿವು ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಕಪ್ಪು ಉಡುಪು ಧರಿಸಿ ಈ ಶಾಂತಿಪೂರ್ಣ ಪ್ರತಿರೋಧದಲ್ಲಿ ಭಾಗವಹಿಸಲಿದ್ದು, ಸಂಜೆ 4 ಗಂಟೆಗೆ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ಬಳಿಕ ಮೆರವಣಿಗೆಯ ಮೂಲಕ ಪಿ.ಪಿ. ವೃತ್ತಕ್ಕೆ ತೆರಳಿ ‘ಸರ್ವ ಜನಾಂಗದ ಶಾಂತಿಯ ದೇಶ’ ಎಂಬ ಘೋಷಣೆಯೊಂದಿಗೆ ಕ್ಯಾಂಡಲ್ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಮಹಿಳೆಯರು ಮೌನವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಗಟ್ಟಿ ಸಂದೇಶ ನೀಡಲಿದ್ದಾರೆ ಎಂದರು.

ಇದೇ ಸರಣಿಯಲ್ಲಿ, ಮಾರ್ಚ್ 7ರಂದು ಹಾಸನದಲ್ಲಿ ಜಾಗೃತಿ ಮೆರವಣಿಗೆ ಮತ್ತು ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಮಹಾರಾಜ ಪಾರ್ಕ್ ಪಶ್ಚಿಮ ದ್ವಾರದಿಂದ ಆರಂಭಗೊಳ್ಳುವ ಮೆರವಣಿಗೆ ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ ಮತ್ತು ಆರ್.ಸಿ. ರಸ್ತೆ ಮೂಲಕ ಸಾಗಿ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಮಹಿಳಾ ದೌರ್ಜನ್ಯ ವಿರೋಧಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು.


ಮಾರ್ಚ್ 8ರಂದು (ಭಾನುವಾರ) ಬೆಳಗ್ಗೆ 9.30ಕ್ಕೆ ಹಾಸನ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ವಿಚಾರಸಂಕಿರಣ ಆಯೋಜಿಸಲಾಗಿದೆ. ಖ್ಯಾತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಭಾಗವಹಿಸಿ ‘ಮಹಿಳಾ ದೌರ್ಜನ್ಯ: ಸವಾಲುಗಳು ಮತ್ತು ಬಿಡುಗಡೆಯ ಸಾಧ್ಯತೆಗಳು’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಭಾಂಗಣ ಸಮಿತಿ ಸಂಚಾಲಕಿ ನಿರ್ಮಲದೇವ್ ಮಾತನಾಡಿ, ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಂತಹ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ತಮ್ಮ ಮೇಲಿನ ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆ ತಾಲೂಕು ಸಂಚಾಲಕಿ ಮಮತಾ ರಾಣಿ, ಹಾಸನ ಜಿಲ್ಲಾ ಖಜಾಂಚಿ ಭಾನುಮತಿ, ತಾಲೂಕು ಒಕ್ಕೂಟದ ಸದಸ್ಯೆಯರಾದ ಧರ್ಮಬಾಯಿ ಮತ್ತು ಮಮತಾ ಉಪಸ್ಥಿತರಿದ್ದರು.