.ನಗರದ ಟಿಎಂಎ ಪೈ ಕೆನ್ವನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ‘ಟೈಕಾನ್ ಮಂಗಳೂರು 2026’
ಮಂಗಳೂರು: ಐಟಿ ವಲಯದ ಬೆಳವಣಿಗೆಯಲ್ಲಿ ದಾಪುಗಾಲಿಡುತ್ತಿರುವ ಮಂಗಳೂರಿನಲ್ಲಿ ಡೇಟಾ ಸೆಂಟರ್ ಸ್ಥಾಪನೆಯ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಕ್ರಿಯಾ ಯೋಜನೆಗಳ ಅಗತ್ಯವಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಶನ್ (ಕೆಡಿಇಎಂ) ಸಿಇಒ ಸಂಜೀವ್ ಕುಮಾರ್ ಗುಪ್ತಾ ಸಲಹೆ ನೀಡಿದ್ದಾರೆ.ನಗರದ ಟಿಎಂಎ ಪೈ ಕೆನ್ವನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸಿಲಿಕಾನ್ ಬೀಚ್ ಸ್ಟಾರ್ಟಪ್ ಸಮಾವೇಶ ‘ಟೈಕಾನ್ ಮಂಗಳೂರು 2026’ರಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಈ ಕಾರ್ಯಕ್ರಮ ಮಂಗಳೂರು ಐಟಿ ವಲಯ ಹೊಸ ಅಲೆಯ ಆರಂಭವಾಗಿದೆ. ಐಟಿ ಕ್ಷೇತ್ರದಲ್ಲಿ ಮಂಗಳೂರು ಕೂಡಾ ದಾಪುಗಾಲಿಡುತ್ತಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 35 ಕಂಪನಿಗಳು ಕಾರ್ಯಾರಂಭಿಸಿದ್ದು, 10ಕ್ಕೂ ಅಧಿಕ ಜಿಸಿಸಿಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿವೆ. 1,000 ಕೋಟಿ ರು. ವ್ಯವಹಾರ ನಡೆಯುತ್ತಿದ್ದು, ಮಂಗಳೂರು ಐಟಿ ವಲಯವನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಲ್ಲಿ ಚಟುವಟಿಕೆಗಳು ನಡೆಯುತ್ತಿವೆ ಎಂದವರು ಹೇಳಿದರು.ಕಳೆದ ಒಂದೂವರೆ ವರ್ಷಗಳಲ್ಲಿ ಕರ್ನಾಟಕ ಸ್ಟಾರ್ಟ್‌ಅಪ್ ವ್ಯವಸ್ಥೆಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 21ನೇ ಸ್ಥಾನದಿಂದ 14ಕ್ಕೆ ಏರಿದೆ. ಭಾರತದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದ್ದೇವೆ. ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂನಿಕಾರ್ನ್, ಟೆಕ್, ಪೇಟೆಂಟ್ ರಾಜಧಾನಿಯಾಗಿ ಹೊರಹೊಮ್ಮಿದೆ. ಮಂಗಳೂರು ಕೂಡಾ ಐಟಿ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದು, ಪ್ರಸಕ್ತ ಮಂಗಳೂರಿನಲ್ಲಿ ಐಟಿ ಕಂಪನಿಗಳಿಗೆ ಬೇಕಾದ 100 ಸಾವಿರ ಚದರ ಅಡಿಯ ಸುಸಜ್ಜಿತ ಮೂಲಸೌಕರ್ಯದ ವ್ಯವಸ್ಥೆ ಇದೆ. ಇನ್ನು 5 ಐಟಿ ಪಾರ್ಕ್:ಮುಂದಿನ ಒಂದು ವರ್ಷದಲ್ಲಿ ಇಲ್ಲಿ ಐದು ಐಟಿ ಪಾರ್ಕ್‌ಗಳು ತಲೆ ಎತ್ತಲಿವೆ. ಈ ಬೆಳವಣಿಗೆಯು 4,500 ಕೋಟಿ ರು.ಗಳ ವ್ಯವಹಾರದ ನಿರೀಕ್ಷೆಯನ್ನು ಹೊಂದಿದ್ದು, ಇದು 10,000 ಕೋಟಿ ರು.ಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಮಂಗಳೂರು ಐಟಿ ವಲಯದಲ್ಲಿ ಕೈಗಾರಿಕಾ ಆಧರಿತ ಬೆಳವಣಿಗೆಯು ಇದಕ್ಕೆಲ್ಲ ಕಾರಣವಾಗಿದೆ. ಮಂಗಳೂರು ಹೊಸ ಅಲೆಯತ್ತ ಕೇವಲ ಹೂಡಿಕೆ ಆಕರ್ಷಣೆಯತ್ತ ಮಾತ್ರವಲ್ಲದೆ, ಐಟಿ ಕ್ಷೇತ್ರದಲ್ಲಿಯೂ ಹೊಸ ರೂಪು ಪಡೆಯುತ್ತಿದೆ. ವರ್ಕ್‌ವರ್ಕ್ ಸ್ಥಾಪಕ ರೋಹಿತ್ ಭಟ್‌ರಂತೆ ಇನ್ನೂ ಹಲವು ಯುವ ಉದ್ಯಮಿಗಳು ಕೆಡಿಎಂ ಜತೆ ಕೈಜೋಡಿಸಬೇಕಾಗಿದೆ. ಮೂರು ವರ್ಷಗಳ ಹಿಂದೆ ಸಣ್ಣ ಮಗುವಿನಂತಿದ್ದ ಮಂಗಳೂರು ಐಟಿ ವಲಯ ಇಂದು ದೊಡ್ಡದಾಗಿ ಬೆಳೆದಿದೆ. ಇದು ಮತ್ತಷ್ಟುಕ್ಷಿಪ್ರಗತಿಯಲ್ಲಿ ವೇಗ ಪಡೆದುಕೊಳ್ಳುವಲ್ಲಿ ಸರ್ಕಾರದ ಜತೆ ಉದ್ದಿಮೆ ಹಾಗೂ ಉದ್ಯಮಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಟೈ ಮಂಗಳೂರು ಚಾಪ್ಟರ ಸ್ಥಾಪಕಾಧ್ಯಕ್ಷ ರೋಹಿತ್ ಭಟ್, ಶೈಕ್ಷಣಿಕ ಹಬ್ ಆಗಿರುವ ಕರಾವಳಿಯ ವಿಶ್ವವಿದ್ಯಾನಿಲಯಗಳ ಜತೆ ಸಂಪರ್ಕವಿರಿಸಿಕೊಂಡು ಯುವ ಉದ್ಯಮಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ಕೇವಲ ಉದ್ಯೋಗ ಗಳಿಸುವುದು ಮಾತ್ರವಲ್ಲ, ಉದ್ಯೋಗದಾತರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ನಿಟ್ಟಿನಲ್ಲಿ ಟೈ ಮಂಗಳೂರು ಕಾರ್ಯಪ್ರವೃತ್ತವಾಗಿದೆ. ಹೊಸ ಉದ್ಯಮ ಸೃಷ್ಟಿಗೆ ಮುಂದಾಗುವವರಿಗೆ ಸರಕಾರದಿಂದ ಪ್ರೋತ್ಸಾಹ ಧನ ಕೊಡಿಸುವಲ್ಲಿಯೂ ಟೈ ಮಂಗಳೂರು ಸಹಕರಿಸುತ್ತಿದೆ ಎಂದವರು ಹೇಳಿದರು.‘2024ರಲ್ಲಿ ಭಾರತ- ಟ್ರಿಲಿಯನ್ ಡಾಲರ್ ಅವಕಾಶಗಳು’ ಎಂಬ ವಿಷಯದಲ್ಲಿ ಡೆಲಾಯ್ಡ್ ಸಂಸ್ಥೆಯ ದಕ್ಷಿಣ ಏಷ್ಯಾ ಸಿಇಒ ರೋಮಲ್ ಶೆಟ್ಟಿ ಮಾತನಾಡಿದರು.ಬೆಂಗಳೂರಿನಲ್ಲಿರುವ ಡೆನ್ಮಾರ್ಕ್ ಕೌನ್ಸೆಲ್ ಜನರಲ್ ಪೀಟರ್ ವಿಂತರ್ ಚೆಮಿತ್ ಅವರು ಮಾತನಾಡಿದರು.
ಇಸ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ, ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು,ಹೆರಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
ಉದ್ಯಮಶೀಲತೆ ಕರಾವಳಿಗರಿಗೆ ರಕ್ತಗತ: ಸಂಸದ ಕ್ಯಾ.ಚೌಟಸ್ಟಾರ್ಟಪ್ಗಳ ಬೆಳವಣಿಗೆಯ ಕುರಿತಾದ ಚರ್ಚಾಗೋಷ್ಟಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯಿಸಿ, ಕರಾವಳಿಗರಲ್ಲಿ ಉದ್ಯಮಶೀಲತೆ ಎಂಬುದು ರಕ್ತದಲ್ಲಿದೆ. ಬೊಳ್ಳು, ಮರಳಿ ಊರಿಗೆ ಎಂಬ ಹಲವು ಕಾರ್ಯಕ್ರಮಗಳ ಮೂಲಕ ಹೊರ ದೇಶ, ರಾಜ್ಯಗಳಲ್ಲಿರುವ ಪ್ರತಿಭೆಗಳನ್ನು ಮಂಗಳೂರಿಗೆ ಸೆಳೆದು ಇಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆ ಪ್ರೋತಾಹಿಸುವ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಮೆರಿಟೈಮ್ ಕ್ಷೇತ್ರದಲ್ಲಿ ಎಐ ಆಧಾರಿತ ಹೊಸ ಉಪಕ್ರಮಗಳನ್ನು ತೆರೆದಿಡಬೇಕಾಗಿದೆ. ನಮ್ಮದೇ ಆದ ಹೊಸ ಇನ್‌ಫೋಸಿಸ್, ಟಿಸಿಎಸ್‌ನಂತಹ ಸಂಸ್ಥೆಗಳನ್ನು ನಾವು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು. ಇಲೆಕ್ಟ್ರಾನಿಕ್ಸ್ ಮತ್ತು ಐಚಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುದೀಪ್ ಶ್ರೀವಾಸ್ತವ ಚರ್ಚಾಗೋಷ್ಟಿಯಲ್ಲಿ ಭಾಗವಹಿಸಿದ್ದರು.