ಕನ್ನಡಪ್ರಭ ವಾರ್ತೆ ಬಾದಾಮಿ
106 ಕೆ.ಜಿ. ಮೌಲ್ಯದ ನೂತನ ಬೆಳ್ಳಿರಥವನ್ನು ಜೂ.17ರಂದು ಬನಶಂಕರಿದೇವಿಗೆ ಸಮರ್ಪಣೆ ಮಾಡಲಾಗುತ್ತಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ವೆಂಕಟೇಶ ಪೂಜಾರ ತಿಳಿಸಿದರು.ಸಮೀಪದ ಬನಶಂಕರಿದೇವ ಸ್ಥಾನ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಭಕ್ತರ ಹಾಗೂ ಅರ್ಚಕರ ಬಹುದಿನಗಳ ಆಶಯದಂತೆ ದೇವಸ್ಥಾನದಲ್ಲಿ ಭಕ್ತರ ಸಹಕಾರ ಮತ್ತು ಪ್ರೇರಣೆಯಿಂದ ಭಕ್ತರ ದೇಣಿಗೆಯಿಂದ ವರ್ಷದ ಒಳಗೆ ಬೆಳ್ಳಿ ಲೇಪನ ರಥವನ್ನು ನಿಪ್ಪಾಣಿಯ ಸುರೇಶ ಶೆಟ್ಟಿಯವರು ನಿರ್ಮಿಸಿದ್ದಾರೆ.
ಜೂ.16ರಂದು ಮತ್ತು ಜೂ.17ರಂದು 2 ದಿನಗಳ ಕಾಲ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪೂಜೆ ಮುಗಿದ ನಂತರ ಜೂನ್ 17ರಂದು ಮಧ್ಯಾಹ್ನ 12.45ಕ್ಕೆ ಸಮರ್ಪಣೆ ಮಾಡಲಾಗುವುದು. ಕುಮಟಾದಲ್ಲಿ ಸಾಗವಾನಿ ರಥ ಮಾಡಿಸಿ ಅದರ ಮೇಲೆ 106 ಕೆ.ಜಿಯ ಶುದ್ಧ ಬೆಳ್ಳಿಯ ಲೇಪನ ಮಾಡಲಾಗಿದೆ. ಸುಮಾರು 15 ಲಕ್ಷ ತಯಾರಿಕೆ ಮಜೂರಿ ನೀಡಿ ನೂತನ ಬೆಳ್ಳಿ ರಥದ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿ ರಥೋತ್ಸವವನ್ನು ಸ್ಥಾಪಿಸಲಾಗುವುದು.ಸಿಂಹದ ಲಾಂಛನ ಮತ್ತು ಅಷ್ಟ ಲಕ್ಷ್ಮೀಯರ ಚಿತ್ರ ರಚಿಸಲಾಗಿದೆ. ಸುಮಾರು 5 ರಿಂದ 6 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿವಿದ ರಾಜ್ಯಗಳ ಸುಮಾರು 25 ಜನ ಅಕ್ಕಸಾಲಿಗರು ಸುಮಾರು 6 ತಿಂಗಳಿನಿಂದ ಬೆಳ್ಳಿ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಜೂ.16ರಂದು ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಜೂ.17ರಂದು ಬೆಳಗ್ಗೆ 10ಗಂಟೆಗೆ ವಿವಿದ ಪೂಜಾ ಕಾರ್ಯಕ್ರಮಗಳ ನಂತರ ಮಧ್ಯಾಹ್ನ 12.45ಗಂಟೆಗೆ ನಡೆಯುವ ದೇವಿ ರಥ ಸಮರ್ಪಣೆ ಬೃಹತ್ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಪೂಜಾರ ಮನೆತನ ಕುಟುಂಬಸ್ಥರಾದ ಮಹೇಶ, ಮಹಾಂತೇಶ, ವಿದ್ಯಾನಂದ, ಶಂಕರ, ಲಕ್ಷ್ಮಣ, ಚಿದಂಬರ, ಕಿರಣ, ರಮೇಶ, ಶ್ರೀನಿವಾಸ, ಶ್ರೀರಂಗ, ಉದಯ ಸೇರಿ ಇತರರು ಇದ್ದರು.