ಸಾರಾಂಶ
ಗದಗ: ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ, ರಾಜ್ಯ ಮಟ್ಟದ ಕನಕೋತ್ಸವ ಹಾಗೂ ಸಂಘ ಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಸಮರ್ಪಣಾ ಕಾರ್ಯಕ್ರಮ ನಗರದ ಕನಕ ಭವನದಲ್ಲಿ ಶನಿವಾರ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕುರುಬ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಮತ್ತಷ್ಟು ಸಬಲೀಕರಣಗೊಳ್ಳಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸಿದ್ದರಾಮಯ್ಯನವರು ಕೇವಲ ರಾಜಕಾರಣಿಯಲ್ಲ, ಬದಲಾಗಿ ಒಬ್ಬ ಸಮಾಜ ಸುಧಾರಕರು. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡತನ ನಿರ್ಮೂಲನೆಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.ಇದೇ ಸಂದರ್ಭದಲ್ಲಿ ಸಮಾಜಮುಖಿ ಎನ್ನುವ ಅಭಿನಂದನಾ ಗ್ರಂಥವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೆಳ್ಳಿ ಬೆಡಗು ಹೆಸರಿನ ಸ್ಮರಣ ಸಂಚಿಕೆಯನ್ನು ಎಚ್.ಕೆ. ಪಾಟೀಲ ಅನಾವರಣಗೊಳಿಸಿದರು. ಹಿಂದುಳಿದ ವರ್ಗಗಳ ಮುಖಂಡ ಕೆ.ರಾಮಚಂದ್ರಪ್ಪ ಮಾತನಾಡಿ, ಸಮೀಕ್ಷೆಗಳಲ್ಲಿ ತಮ್ಮ ಉಪಜಾತಿಯನ್ನು ನಮೂದಿಸದೆ, ಕೇವಲ ಕುರುಬ ಎಂದು ನಮೂದಿಸಬೇಕು ಮತ್ತು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂಮಿ ನೀಡಿದ ಈಶ್ವರಸಾ ಮೆರವಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಕುರುಬರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಫಕೀರಪ್ಪ ಹೆಬಸೂರ ದಂಪತಿ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಜಿ.ಎಸ್. ಪಾಟೀಲ್, ಧವನ ರಾಕೇಶ ಸಿದ್ದರಾಮಯ್ಯ, ಫಕೀರಪ್ಪ ಹೆಬಸೂರ, ಸಲೀಂ ಅಹ್ಮದ, ಎನ್.ಎಚ್. ಕೋನರಡ್ಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಡಿ.ಆರ್. ಪಾಟೀಲ್ ಸ್ವಾಗತಿಸಿ, ಸ್ವಾಗತ ಸಮಿತಿಯ ಅಧ್ಯಕ್ಷ ಜಿ.ಎಸ್. ಪಾಟೀಲ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಮೌರ್ಯ ನಿರೂಪಿಸಿದರು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾಜಿ ಶಾಸಕ ಡಿ.ಆರ್. ಪಾಟೀಲರು ಸ್ವಾಗತಿಸುವ ವೇಳೆಯಲ್ಲಿ ಕುರುಬರಿಂದಲೇ ಎಲ್ಲವೂ ನಿಮ್ಮಿಂದಲೇ ಮೊದಲ ಪೂಜೆ ಎಂದು ಬಣ್ಣಿಸಿದ್ದನ್ನು ಉಲ್ಲೇಖಿಸುತ್ತಾ, ನೀವು ಗೆದ್ದಿರುವುದು ಸಿದ್ದರಾಮಯ್ಯನವರಿಂದ ಮತ್ತು ಕುರುಬ ಸಮುದಾಯದಿಂದ. ಹಾಗಾಗಿ ಅಧಿಕಾರ ಹಂಚಿಕೆಯಲ್ಲಿ ನಮ್ಮ ಸಮುದಾಯಕ್ಕೂ ಆದ್ಯತೆ ನೀಡಬೇಕು ಎಂದು ವೇದಿಕೆಯಲ್ಲಿಯೇ ನೇರವಾಗಿ ಹೇಳಿದ್ದು ವಿಶೇಷವಾಗಿತ್ತು.