ಸಾರಾಂಶ
ಅಂಚೆ ಚೀಟಿ ಸಂಗ್ರಾಹಕರಾದ ಬ್ರಹ್ಮಾವರದ ಕುಮ್ರಗೋಡು ಗ್ರಾಮದ ಡೇನಿಯಲ್ ಮಂತೇರೋ ಅವರಿಗೆ ಬೆಳ್ಳಿಯ ಪದಕ ಲಭಿಸಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಂಡೋನೇಶಿಯಾ ಜಕಾರ್ತ್‌ದಲ್ಲಿ ಜುಲೈ 3 ರಿಂದ 7 ರ ವರೆಗೆ ನಡೆದ ಏಶಿಯಾ ಅಂತಾರಾಷ್ಟ್ರೀಯ ಅಂಚೆ ಚೀಟಿ ಪ್ರದರ್ಶನ ‘ಜಕಾರ್ತ - 2024ʼ ಸ್ಪರ್ಧೆಯಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಾಹಕರಾದ ಬ್ರಹ್ಮಾವರದ ಕುಮ್ರಗೋಡು ಗ್ರಾಮದ ಡೇನಿಯಲ್ ಮಂತೇರೊ, ಅವರು ‘ನವಿಲುಗಳು (ಪಿಕಾಕ್ - ದ ಕಿಂಗ್ ಆಫ್ ಫೆದರ್ಸ್)ʼ ಎಂಬ ವಿಷಯದ ಮೇಲೆ ಪ್ರದರ್ಶಿಸಿದ ಅಂಚೆ ಚೀಟಿಗಳಿಗೆ ಬೆಳ್ಳಿಯ ಪದಕ ಲಭಿಸಿದೆ.ಮಂತೇರೋ ಅವರು ಈ ಹಿಂದೆ ನಡೆದ ಹಾಂಗ್‌ಕಾಂಗ್, ಚೀನ, ಕೋರಿಯಾ, ದಕ್ಷಿಣ ಆಫ್ರಿಕಾ, ಥೈಲಾಂಡ್, ನ್ಯೂಡೆಲ್ಲಿ, ಇಂಡೋನೇಶಿಯಾ, ಆಸ್ಟ್ರೀಯಾ, ಬೆಲ್ಜಿಯಂ, ಸಿಂಗಾಪುರ, ಮೆಕಾವೊ, ಬಾಂಗ್ಲಾದೇಶ, ದುಬೈ ಮುಂತಾದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.
ಅಲ್ಲದೇ ಅವರು ಪಕ್ಷಿಗಳ ಬಗೆಗೆ ಅಂಚೆ ಚೀಟಿ ಸಂಗ್ರಹದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡಿರುತ್ತಾರೆ. ಅಲ್ಲದೆ ಎರಡು ಲಿಮ್ಕಾ ದಾಖಲೆ, ಮೂರು ಇಂಡಿಯಾ ಬುಕ್ ಆಪ್ ರೆಕಾರ್ಡ್, ಯೂನಿಕ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡಿರುತ್ತಾರೆ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಮೊಂತೇರೊ ಅವರು ದಕ್ಷಿಣ ಕನ್ನಡ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ ಮಂಗಳೂರು, ಮಣಿಪಾಲ ವಿಶ್ವವಿದ್ಯಾಲಯ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ ಮತ್ತು ಕರ್ನಾಟಕ ಪಿಲಾಟೇಲಿಕ್ ಸೊಸೈಟಿ ಬೆಂಗಳೂರು ಇವುಗಳ ಸಕ್ರಿಯ ಸದಸ್ಯರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಪಕ್ಷಿಗಳ ಅಂಚೆಚೀಟಿ ಪ್ರದರ್ಶನಗಳನ್ನು ನಡೆಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.