ಬೇಲೂರಿನಲ್ಲಿ ಆಟೋಗಳಿಗೆ ಸರಳ ಸಂಖ್ಯೆ ಸ್ಟಿಕರ್

| Published : May 17 2024, 12:35 AM IST

ಸಾರಾಂಶ

ಬೇಲೂರು ಪಟ್ಟಣದ ವ್ಯಾಪ್ತಿಯಲ್ಲಿನ ಆಟೋಗಳಿಗೆ ಅನುಕ್ರಮವಾಗಿ ಸರಳವಾದ ಸಂಖ್ಯೆ ಇರುವ ಸ್ಟಿಕರ್‌ಗಳನ್ನು ಅಂಟಿಸುವ ಕಾರ್ಯಕ್ರಮಕ್ಕೆ ಪಿಎಸ್ಐ ಪ್ರವೀಣ್ ಚಾಲನೆ ನೀಡಿದರು.

ಪಿಎಸ್ಐ ಪ್ರವೀಣ್ ಚಾಲನೆ । ಚಾಲಕರ ಮೇಲೆ ನಿಗಾ

ಬೇಲೂರು: ಪಟ್ಟಣದ ವ್ಯಾಪ್ತಿಯಲ್ಲಿನ ಆಟೋಗಳಿಗೆ ಅನುಕ್ರಮವಾಗಿ ಸರಳವಾದ ಸಂಖ್ಯೆ ಇರುವ ಸ್ಟಿಕರ್‌ಗಳನ್ನು ಅಂಟಿಸುವ ಕಾರ್ಯಕ್ರಮಕ್ಕೆ ಪಿಎಸ್ಐ ಪ್ರವೀಣ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ ಆಟೋಗಳಿಗೆ ಸಂಖ್ಯೆ ಇರುವ ಸ್ಟಿಕರ್ ಅಂಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೇ ಸಂಚರಿಸುತ್ತಿರುವ ಆಟೋಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಟ್ಟಣದ ಆಟೋ ಚಾಲಕರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ಪ್ರತಿ ಆಟೋ ವಾಹನಕ್ಕೂ ವಿಶೇಷ ಸಂಖ್ಯೆಯನ್ನು ನೀಡಲಾಗಿದೆ ಎಂದು ಹೇಳಿದರು.

ಇನ್ನು ಮುಂದೆ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಾಹನದ ಸಂಖ್ಯೆಯನ್ನು ಗುರುತಿಸಿಕೊಳ್ಳಬೇಕಾಗಿಲ್ಲ. ಪೊಲೀಸರು ನೀಡಿರುವ ಸರಳ ಸಂಖ್ಯೆಯನ್ನು ತಿಳಿದುಕೊಂಡು ಸಂಬಂಧಪಟ್ಟವರ ಗಮನಕ್ಕೆ ತಂದರೆ ಪೊಲೀಸರು ಆ ಸಂಖ್ಯೆಯನ್ನಾಧಾರಿಸಿ ಸಂಬಂಧಪಟ್ಟ ಆಟೋ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಆಟೋದಲ್ಲಿ ಪ್ರಯಾಣಿಸುವಾಗ ಚಾಲಕರು ದುಬಾರಿ ಹಣವನ್ನು ಕೇಳುವುದು, ಇದರಿಂದ ಆಗಾಗ ಚಾಲಕರು ಮತ್ತು ಪ್ರಯಾಣಿಕರ ನಡುವೆ ಗಲಾಟೆ ನಡೆಯುತ್ತಿರುತ್ತದೆ. ಮತ್ತೊಂದು ಸಂದರ್ಭದಲ್ಲಿ ಪ್ರಯಾಣಿಕರು ವಾಹನದಲ್ಲಿ ತಮ್ಮ ವಸ್ತುಗಳನ್ನು ಕಳೆದುಕೊಂಡರೆ, ಇಲ್ಲವೇ ಚಾಲಕರು ದೂರ ಕರೆದುಕೊಂಡು ಹೋಗಿ ದೌರ್ಜನ್ಯವೆಸಗಿದ ಸಂದರ್ಭದಲ್ಲಿ ಪೊಲೀಸರಿಗೆ ದೂರು ಕೊಡುವ ಪ್ರಯಾಣಿಕರಿಗೆ ಆ ವಾಹನದ ಸಂಖ್ಯೆಯೇ ತಿಳಿಯುವುದಿಲ್ಲ. ಕೆಎ 13-46 ಇದರ ಜೊತೆಗೆ ಎರಡ್ಮೂರು ಸಂಖ್ಯೆಯನ್ನು ಗುರುತಿಟ್ಟುಕೊಳ್ಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರತಿ ಆಟೋ ವಾಹನಕ್ಕೂ 1,2,3,4, ಹೀಗೆ ಅನುಕ್ರಮವಾಗಿ ಸರಳವಾದ ಸಂಖ್ಯೆಗಳನ್ನು ಅಧಿಕೃತವಾಗಿ ನೀಡಿದೆ. ಇದರಿಂದ ಪಟ್ಟಣದಲ್ಲಿ ಎಷ್ಟು ವಾಹನಗಳು ಸಂಚರಿಸುತ್ತಿವೆ ಎನ್ನುವುದು ಸುಲಭವಾಗಿ ಲೆಕ್ಕಕ್ಕೆ ಸಿಗುವುದಲ್ಲದೇ ಈ ಸರಳ ಸಂಖ್ಯೆಯನ್ನು ತಿಳಿಸಿದರೆ ಸಾಕು ಸುಲಭವಾಗಿ ವಾಹನ ಮತ್ತು ಚಾಲಕರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹೊಯ್ಸಳ ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು, ಪೊಲೀಸ್ ಸಿಬ್ಬಂದಿ ದೇವರಾಜ್, ದೇವೇಂದ್ರ ಸೇರಿ ಆಟೋ ಚಾಲಕರು ಇದ್ದರು.