ವಸತಿ ಯೋಜನೆ ನಿಯಮಾವಳಿ ಸರಳೀಕರಣವಾಗಲಿ: ಬಾಲಚಂದ್ರ ಶೆಟ್ಟಿ

| Published : Feb 25 2025, 12:48 AM IST

ವಸತಿ ಯೋಜನೆ ನಿಯಮಾವಳಿ ಸರಳೀಕರಣವಾಗಲಿ: ಬಾಲಚಂದ್ರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ರಹಿತರಿಗೆ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವು ನಿಯಮಾವಳಿಯನ್ನು ಕೇಂದ್ರ ಬದಲಿಸಬೇಕು

ಕಾರವಾರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಕೆಲವು ನಿಯಮಾವಳಿಗಳಿಂದ ಬಡವರಿಗೆ, ವಸತಿ ರಹಿತರಿಗೆ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಕೆಲವು ನಿಯಮಾವಳಿಯನ್ನು ಕೇಂದ್ರ ಬದಲಿಸಬೇಕು ಎಂದು ಅಂಕೋಲಾ ತಾಲೂಕಿನ ಗ್ರಾಪಂ ಒಕ್ಕೂಟಗಳ ಅಧ್ಯಕ್ಷ ಬಾಲಚಂದ್ರ ಶೆಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಸತಿ ರಹಿತರಿಗೆ ವಸತಿ ನಿರ್ಮಿಸಿಕೊಡುವ ಯೋಜನೆಯಡಿ ಅಂಕೋಲಾ ತಾಲೂಕಿನ ಎಲ್ಲ ಗ್ರಾಪಂ ಸೇರಿ ೨೨೫೦ ಮನೆಗಳ ಗುರಿಯನ್ನು ಪ್ರಸಕ್ತ ಸಾಲಿನಲ್ಲಿ ನೀಡಲಾಗಿದೆ. ಆದರೆ ಕೆಲವು ನಿಯಮದಿಂದ ಈ ಸಂಖ್ಯೆಯ ಗುರಿ ತಲುಪುವುದು ಗ್ರಾಪಂಗೆ ಕಷ್ಟಕರವಾಗಿದೆ. ಹೀಗಾಗಿ ನಿಯಮಗಳನ್ನು ಬದಲಿಸಿದರೆ ಮಾತ್ರ ಗುರಿ ತಲುಪಲು ಸಾಧ್ಯವಾಗಲಿದೆ ಎಂದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸ್ವಂತ ಭೂಮಿ ಹೊಂದಿದ್ದರೆ ಮಾತ್ರ ಮನೆಯನ್ನು ನೀಡಬಹುದಾಗಿದೆ ಎಂದಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಕೆಲವರು ಸ್ವಂತ ಭೂಮಿ ಇಲ್ಲದೇ ಅತಿಕ್ರಮಣ ಮಾಡಿಕೊಂಡಿದ್ದಾರೆ. ಕರ ಪಾವತಿಸುತ್ತಿದ್ದರೂ ಇಂತಹ ಯಾವುದೇ ಫಲಾನುಭವಿಗಳಿಗೆ ಯೋಜನೆಯ ನಿಯಮಾವಳಿಗಳ ಪ್ರಕಾರ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಅತಿಕ್ರಮಣದ ಯೋಜನೆಯಡಿ ಈಗಾಗಲೇ ತೆರಿಗೆಯನ್ನು ಪಾವತಿ ಮಾಡುವವರಿಗೂ ನೀಡುವಂತಾಗಬೇಕು. ಗ್ರಾಪಂ ಮಟ್ಟದಲ್ಲಿ ಸಾಮೂಹಿಕ ಆಸ್ತಿಯನ್ನು ಹೊಂದಿದವರ ಸಂಖ್ಯೆ ಹೆಚ್ಚಾಗಿದ್ದು, ಇವರಿಗೂ ಸಿಗುವಂತಾಗಬೇಕು. ನಿಯಮದಲ್ಲಿ ಸರಳೀಕರಣ ಮಾಡಿದರೆ ಮಾತ್ರ ಅರ್ಹ ಎಲ್ಲರಿಗೂ ಮನೆ ಒದಗಿಸಲು ಆಗುತ್ತದೆ ಎಂದು ಅಭಿಪ್ರಾಯಿಸಿದರು.

ಎರಡು ಹೊಸ ಗ್ರಾಪಂಗಳಾದ ವಾಸರಕುದ್ರಿಗೆ, ಹೊನ್ನೆಬೈಲ್‌ಗೆ 10 ವರ್ಷ ಕಳೆದರೂ ತಂತ್ರಾಂಶದಲ್ಲಿ ಇನ್ನು ಅಳವಡಿಸದ ಕಾರಣ ಮನೆ ಗುರಿಯು ಬಂದಿಲ್ಲ. ಇದರಿಂದ ಈ ಎರಡು ಗ್ರಾಪಂ ಜನರಿಗೆ ಮನೆ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತರೇ ವಸತಿ ಯೋಜನೆಗಳಲ್ಲೂ ಕೂಡ ಫಲಾನುಭವಿಯ ಮನೆಯ ಪ್ರಾರಂಭಿಕ ಹಂತದ ಜಿಪಿಎಸ್ ಮಾಡಿದ ಸ್ಥಳಕ್ಕೂ ನಂತರದ ಸ್ಥಳಕ್ಕೂ ಸ್ವಲ್ಪ ವ್ಯತ್ಯಾಸವಾದರೂ ತೊಂದರೆಯಾಗುತ್ತಿದೆ. ಮುಂದಿನ ಹಂತದಲ್ಲಿ ಮನೆ ಪೋಟೊ ಜಿಪಿಎಸ್ ಮಾಡುವ ಸಂದರ್ಭದಲ್ಲಿ ಮಿತಿಯಲ್ಲಿ ಇರುವುದಿಲ್ಲ ಎಂದು ಬರುತ್ತಿದೆ. ಇದನ್ನು ಕೂಡ ಸರಿಪಡಿಸಬೇಕು ಎಂದರು.

ಅಂಕೋಲಾ ತಾಲೂಕಿನ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.

ಅಂಕೋಲಾ ತಾಲೂಕಿನ ಗ್ರಾಪಂ ಒಕ್ಕೂಟದಿಂದ ಸುದ್ದಿಗೋಷ್ಠಿ ನಡೆಯಿತು.