ಸಾರಾಂಶ
ದಸರಾ ಪ್ರಯುಕ್ತ ಸಾಂಪ್ರದಾಯಿಕವಾಗಿ ಗರಡಿ ಪೂಜೆ ಮಾಡಲಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಒಳಗೆ ಮತ್ತು ಹೊರಗೆ ಅಗತ್ಯ ಭೂಮಿ ದೊರೆತರೆ ಟೌನ್ ಶಿಪ್ ನಿರ್ಮಿಸಿ, ಅಶೋಕಪುರಂನಲ್ಲಿ ವಾಸಿಸುತ್ತಿರುವ ಬಡವರಿಗೆ ಮನೆ ನಿರ್ಮಾಣ ಸೇರಿ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.ನಗರದ ಅಶೋಕಪುರಂ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ದೊಡ್ಡ ಗರಡಿ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ 112ನೇ ವರ್ಷದ ಮಟ್ಟಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಸರಾ ಪ್ರಯುಕ್ತ ಸಾಂಪ್ರದಾಯಿಕವಾಗಿ ಗರಡಿ ಪೂಜೆ ಮಾಡಲಾಗಿದೆ. ಅಶೋಕಪುರಂನ ಮುಖಂಡರು, ನಿವಾಸಿಗಳು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗುವುದು ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ದಲಿತರ ವಿಚಾರ ಪ್ರಸ್ತಾಪಿಸಿ, ಗುಲ್ಬರ್ಗಾದಲ್ಲಿ ದಲಿತರಿಗಾಗಿ ಒಂದೇ ಕಡೆಯಲ್ಲಿ 2 ಸಾವಿರ ಮನೆ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಮೈಸೂರಿನ ಅಶೋಕಪುರಂನ ಜನರಿಗೂ ಮಾಡುವಂತೆ ಹೇಳಿದರು. ಈ ಬಗ್ಗೆ ಚಿಂತನೆ ನಡೆಸಲಾಗಿದೆ. ಮೈಸೂರಿನಲ್ಲಿ ಒಂದು ಟೌನ್ ಶಿಪ್ ಮಾಡಲು ಜಾಗ ಹುಡುಕಲಾಗುವುದು. ಒಂದು ಉತ್ತಮ ಜಾಗ ದೊರಕಿದರೆ ಖಂಡಿತವಾಗಿ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮಾನತೆ ದೊರೆತಿಲ್ಲ. ಇಂದಿಗೂ ಬಲಾಢ್ಯರನ್ನು ಎದುರಿಸಿ ಬದುಕಬೇಕು. ಸಾವಿರಾರು ಜನರು ಉದ್ಯೋಗ ಪಡೆದು ಬದುಕಬೇಕು. ದಲಿತ ಸಮುದಾಯದ ಅಭಿವೃದ್ಧಿಗೆ ಬೇಕಾದ ಕ್ರಮ. ನಮ್ಮ ನಿರೀಕ್ಷಿತ ಪ್ರಮಾಣದಲ್ಲಿ ಅಶೋಕಪುರಂನಲ್ಲಿ ಕೆಲಸಗಳಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಅಶೋಕಪುರಂಗೆ ಆಗಬೇಕಿರುವ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ, ದೊಡ್ಡ ಗರಡಿ, ಚಿಕ್ಕಗರಡಿ, ಸಮುದಾಯ ಭವನದ ಅಭಿವೃದ್ಧಿಗೆ 10 ಕೋಟಿ ರೂ. ನೀಡಲಾಗಿದೆ. ಆದಿ ಕರ್ನಾಟಕ ಮಹಾ ಸಂಸ್ಥೆ ಕಟ್ಟಡದ ನವೀಕರಣಕ್ಕೆ ಹೆಚ್ಚುವರಿ 6 ಕೋಟಿ ರೂ. ನೀಡುವಂತೆ ಮನವಿ ಮಾಡಿದರು.ಇದೇ ವೇಳೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಯಾದವಿ, ಸಮರ್ಥ್, ಅಶೋಕಪುರಂ ಹಿರಿಯ ಪೈಲ್ವಾನರು, ದಸರಾ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಹಿರಿಯ ಮುಖಂಡ ಮ. ವೆಂಕಟರಾಮ್, ದೊಡ್ಡಗರಡಿ ಉಸ್ತಾದ್ ಪುಟ್ಟಸ್ವಾಮಿ, ಖಲೀಫ್ ಜಿ. ಸಿದ್ದಯ್ಯ ಸಂಘದ ಅಧ್ಯಕ್ಷ ಆರ್.ಸಿ. ಮಹೇಶ್, ಕೆಂಪೇಗೌಡ, ಹೊಸಹಳ್ಳಿ ಶಿವು, ವಿ. ರಾಮಸ್ವಾಮಿ, ಪೈ. ಚಂದ್ರಶೇಖರ್, ವೆಂಕಟರಾಮ್, ವಕೀಲ ಬಸವರಾಜು, ರಮೇಶ್, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸುನೀಲ್, ಶಿವಸ್ವಾಮಿ, ಈಶ್ವರ್, ಕೃಷ್ಣ ಇದ್ದರು. ----ಕೋಟ್...ನಾವಿಬ್ಬರೂ ಒಟ್ಟಿಗೆ ಇರುವ ಕಾರಣ ದಬ್ಬಾಳಿಕೆ ಮಾಡಲು ಸಾಧ್ಯವಾಗಿಲ್ಲ. 2013 ರಲ್ಲಿ ಇಡೀ ಮಂತ್ರಿಮಂಡಲ ರಚನೆ ಮಾಡಿದ್ದು ನಾನು ಮತ್ತು ಸಿದ್ದರಾಮಯ್ಯ ಹೊರತು ಯಾವ ಹೈಕಮಾಂಡ್ ಕೂಡ ಹಸ್ತಕ್ಷೇಪ ಮಾಡಿ ಮಂತ್ರಿಗಳನ್ನು ಆಯ್ಕೆ ಮಾಡಲಿಲ್ಲ. ಹಿರಿಯರಾದ ವಿ. ಶ್ರೀನಿವಾಸಪ್ರಸಾದ್ ಬೈದುಕೊಂಡು ಓಡಾಡಿದರೂ ಪರವಾಗಿಲ್ಲ. ಮಂತ್ರಿ ಮಾಡೋಣವೆಂದು ನಾನು ಮತ್ತು ಸಿದ್ದರಾಮಯ್ಯ ಅವರೇ ತೀರ್ಮಾನಿಸಿದ್ದೇವು.