ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ನೋಂದಣಿಯಾಗಿ ದಾಖಲೆ ರೂಪದಲ್ಲಿರುವುದರಿಂದ ಪ್ರತಿಯೊಂದು ಅರ್ಜಿಗಳನ್ನು ರಾಜ್ಯ ಮಟ್ಟದ ಪ್ರಜಾಸೇವಾ ಇಲಾಖೆ ಪರಿಶೀಲನೆ ಮಾಡಲಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅರ್ಜಿದಾರರ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಪರಿಹರಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ನಿರ್ಧಿಷ್ಟ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಮಾತನಾಡಿ, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳು ನೋಂದಣಿಯಾಗಿ ದಾಖಲೆ ರೂಪದಲ್ಲಿರುವುದರಿಂದ ಪ್ರತಿಯೊಂದು ಅರ್ಜಿಗಳನ್ನು ರಾಜ್ಯ ಮಟ್ಟದ ಪ್ರಜಾಸೇವಾ ಇಲಾಖೆ ಪರಿಶೀಲನೆ ಮಾಡಲಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅರ್ಜಿದಾರರ ಸಮಸ್ಯೆಗಳನ್ನು ಕಡಿಮೆ ಅವಧಿಯಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರ ನೀಡುವ ಬದಲು ರಾಜಕೀಯ ಪ್ರೇರಿತವಾಗಿ ಬಳಸಿಕೊಂಡು ಅಶಾಂತಿ ಉಂಟು ಮಾಡಿ ಅಬ್ಬರದ ಪ್ರಚಾರವನ್ನು ಪಡೆದು ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಯತ್ನಗಳು ನಡೆಯುತ್ತಿವೆ. ಸರಿತಪ್ಪುಗಳ ಬಗ್ಗೆ ಜನರು ವಿಮರ್ಶೆ ಮಾಡಬೇಕು ಎಂದರು.ಸಾಧನೆ ಮಾತನಾಡಬೇಕೇ ಹೊರತು ಮಾತನಾಡುವುದೇ ಸಾಧನೆಯಾಗಬಾರದು. ಸೇವಾ ಕ್ಷೇತ್ರವಾಗಿರುವ ರಾಜಕೀಯದಲ್ಲಿ ಅಭಿವೃದ್ದಿಪಡಿಸುವ ಚಿಂತನೆ ನಡೆಸಬೇಕು. ಆದರೆ, ಸಮಸ್ಯೆಗಳನ್ನು ಜೀವಂತವಾಗಿಸಿಕೊಂಡು ಅಭಿವೃದ್ದಿಗೆ ಹಿನ್ನಡೆ ಉಂಟು ಮಾಡುವುದು ಸಾರ್ವಜನಿಕರಿಗೆ ಮಾಡಿದ ದ್ರೋಹವಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವಪೀಳಿಗೆ ಭವಿಷ್ಯವನ್ನು ರೂಪಿಸಿ ಸದೃಢ ಸಮಾಜ ಕಟ್ಟಬೇಕಿದೆ. ಕೃಷಿಯೂ ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ ವೇಳೆ ಯುವಕರು ಸಮಯವನ್ನು ವ್ಯರ್ಥ ಮಾಡದೇ ಆಧುನಿಕ ಬೇಸಾಯದೊಂದಿಗೆ ಹೆಚ್ಚು ಲಾಭಗಳಿಸಿ ಆರ್ಥಿಕತೆಯಲ್ಲಿ ಸದೃಢರಾಗಬೇಕೆಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವುಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಇತ್ಯರ್ಥಗೊಳಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಬರಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು ಸರ್ಕಾರ ಸಾರ್ವಜನಿಕರ ಬಳಿಯೇ ಅಧಿಕಾರಿಗಳು ಹೋಗಿ ಸಮಸ್ಯೆಗಳನ್ನು ಆಲಿಸಬೇಕೆಂದು ಪ್ರಜಾ ಸೇವಾ ಆಂದೋಲನವನ್ನು ನಿಗಧಿಪಡಿಸಲಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅಂದೋಲನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2500ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಿದೆ. ಅರ್ಜಿದಾರರು ಕ್ರಮದ ಬಗ್ಗೆ ತೃಪ್ತಿ, ಅತೃಪ್ತಿ ತಿಳಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅರ್ಜಿದಾರರ ಒಪ್ಪಿಗೆ ನಂತರವೇ ಅರ್ಜಿಯನ್ನು ಮುಕ್ತಾಯಗೊಳಿಸಲಾಗುವುದು. ಪ್ರಜೆಗಳ ಸೇವೆಗಾಗಿ ಪ್ರಜಾಸೇವಾ ಆಂದೋಲನ ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಪ್ರಜಾಸೇವಾ ಆಂದೋಲನ ಸಭೆಯಲ್ಲಿ ನೂರಕ್ಕೆ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಯಿತು. ಸಚಿವರು, ಜಿಲ್ಲಾಧಿಕಾರಿಗಳು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅವಧಿಯೊಳಗೆ ತಕ್ಕ ಉತ್ತರ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರೇಖಾ, ತಹಸೀಲ್ದಾರ್ ಲೋಕೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಮಾದೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ತಾಪಂ ಇಓ ಶ್ರೀನಿವಾಸ್ ಸೇರಿದಂತೆ ಅಧಿಕಾರಿಗಳು ಇದ್ದರು.