ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ 50ರ ಸಂಭ್ರಮ

| Published : Dec 30 2023, 01:15 AM IST

ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ 50ರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಭಾಗಿ, ಮೂರು ದಿನ ವಿವಿಧ ಕಾರ್ಯಕ್ರಮಗಳು ಆಯೋಜನೆ, ಪ್ರಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್‌ ಕಟ್ಟಡದಲ್ಲಿದ್ದ ಕಾಲೇಜಿಗೆ ಹೈಟೆಕ್ ಸಿಂಚನ.

ಕನ್ನಡಪ್ರಭ ವಾರ್ತೆ ಸಿಂಧನೂರು

1971ರ ದಶಕದಲ್ಲಿ ವಿದ್ಯಾರ್ಥಿಗಳ ಸತತ ಹೋರಾಟದಿಂದ ಹಾಗೂ ಮಾಜಿ ಶಾಸಕ ಗದ್ರಟಗಿ ಅಮರೇಗೌಡರ ಅವಿರತ ಶ್ರಮದಿಂದಾಗಿ ಸಿಂಧನೂರಿಗೆ ಸರ್ಕಾರಿ ಕಾಲೇಜು ಮಂಜೂರಾಯಿತು. ಆರಂಭದಲ್ಲಿ ಪಿಎಲ್ಡಿ ಬ್ಯಾಂಕ್‌ನ ಕಟ್ಟಡದಲ್ಲಿ ತರಗತಿಗಳು ಆರಂಭಗೊಂಡು ಪ್ರಸ್ತುತ ಕಾಲೇಜು ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹೈಟೆಕ್ ಕಾಲೇಜ್ ಆಗಿ ಬೆಳೆದು ಬಂದದ್ದು ಇತಿಹಾಸವೇ ಸರಿ.

ಕಲ್ಯಾಣ ಕರ್ನಾಟಕದಲ್ಲಿ ಕಲಬುರಗಿ ಹೊರತುಪಡಿಸಿದರೆ ಸಿಂಧನೂರಿನ ಪ್ರಥಮ ದರ್ಜೆ ಸರ್ಕಾರಿ ಮಹಾವಿದ್ಯಾಲಯ ಅತ್ಯಂತ ಹಳೆಯದಾದ ಮತ್ತು ಮಹತ್ವದ ಸಾಧನೆ ಮಾಡಿದ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಈಗ ೫೦ರ ಸಂಭ್ರಮದಲ್ಲಿದ್ದು, ಡಿ.30, 31 ಮತ್ತು ಜ.1ರಂದು ಕಾಲೇಜಿನಲ್ಲಿ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು 6 ಜನ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಿರುವುದು ವಿಶೇಷವಾಗಿದೆ.

ಕಾಲೇಜು ಪ್ರಾರಂಭದ ದಿನಗಳಲ್ಲಿ ಪಿಎಲ್‌ಡಿ ಬ್ಯಾಂಕಿನ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದವು. ಬಳಿಕ ಕುಷ್ಟಗಿ ರಸ್ತೆಯಲ್ಲಿ 32 ಎಕರೆ ಸರ್ಕಾರಿ ಜಮೀನಿನಲ್ಲಿ ಕಾಲೇಜು ಕಟ್ಟಡವನ್ನು 1981ರಲ್ಲಿ ನಿರ್ಮಿಸಲಾಗಿದೆ. 2003ರಲ್ಲಿ ಕಲಬುರಗಿ ವಿಶ್ವವಿದ್ಯಾಲಯಕ್ಕೆ ವ್ಯಾಪ್ತಿಗೆ ಒಳಪಟ್ಟಿತ್ತು. 2021-2022ನೇ ಸಾಲಿನಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಿಗೆ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರ್ಪಡೆಯಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಎಂ.ವೆಂಕಟನಾರಾಯಣ ಹೇಳಿದರು.

1971ರಲ್ಲಿ ಕೇವಲ 22 ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಪ್ರಸ್ತುತ 3100 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 35 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ.

ಸುವರ್ಣಮಹೋತ್ಸವದ ಅಂಗವಾಗಿ 3 ದಿನಗಳ ಕಾಲ ಕಾಲೇಜಿನಲ್ಲಿ ಹಬ್ಬದ ಸಂಭ್ರಮ ಏರ್ಪಡಲಿದ್ದು, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.