ಅತ್ಯಂತ ವಿಶಿಷ್ಟವಾಗಿರುವ ನಮ್ಮ ಸನಾತನ ಹಿಂದೂ ಧರ್ಮದ ನಾಶಕ್ಕೆ, ವಿವಿಧ ರೀತಿಯ ತೊಂದರೆಗಳನ್ನು ಕೊಡುವುದಕ್ಕಾಗಿ ಅನೇಕ ದುಷ್ಟಶಕ್ತಿಗಳು ಪ್ರಯತ್ನಿ ಸುತ್ತಿದ್ದು, ಆದ್ದರಿಂದ ಹಿಂದೂಗಳೆಲ್ಲರೂ ಭೇದಭಾವ ಮರೆತು, ಸಂಘಟಿತರಾಗಿ, ಧರ್ಮಕ್ಕೆ ಯಾವುದೇ ರೀತಿಯ ಚುತಿ ಬಾರದಂತೆ ಜಾಗರೂಕತೆಯನ್ನು ವಹಿಸಿ, ಮುಂದಿನ ಸಂತತಿಗೆ ಹಿಂದೂ ಧರ್ಮದ ಹಿರಮೆ ಗರಿಮೆಗಳನ್ನು ಮುಂದಿನ ಸಂತತಿಗೆ ತಿಳಿಸಿಕೊಡುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ನಿಮಿತ್ತ ಸೋಮವಾರ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ನಗರದ ಬ್ರಾಹ್ಮಣರ ಓಣಿಯ ಶ್ರೀರಾಮ ಮಂದಿರದಲ್ಲಿ ಬೃಂದಾವನಕ್ಕೆ ಅರ್ಚಕ ಸುಬ್ಬಶಾಸ್ತ್ರಿ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಶ್ರೀರಾಮ ಮಂದಿರದಿಂದ ಶೆಟ್ಟರ ಚಿನ್ನದವರೆಗೆ ರಥೋತ್ಸವ ಜರಗಿತು. ಭಕ್ತಾದಿಗಳಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬ್ರಾಹ್ಮಣರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದ ರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ಮುಖಂಡರಾದ ವೆಂಕಣ್ಣಾಚಾರ್ ಜೋಷಿ ದೋಟಿಹಾಳ, ಎಂ.ಕೆ. ಗೌರಕರ್, ಮನೋಹರ ರಾವ್ ಕುಲಕರ್ಣಿ, ಹನುಮಂತ ಆಚಾರ್ಯ ಮಸ್ಕಿ, ವೆಂಕಟರಾವ್ ಚೆನ್ನಳ್ಳಿ, ಪ್ರಾಣೇಶ ಸಿದ್ರಾಂಪುರ, ಸತ್ಯನಾರಾಯಣರಾವ್, ರಾಘವೇಂದ್ರರಾವ್ ಚೆನ್ನಳ್ಳಿ, ಗುಂಡುರಾವ್, ಭೀಮಸೇನ ಆಚಾರ್ಯ ಪುರೋಹಿತ, ವೆಂಕಟೇಶ ಸಿದ್ದಾಂಪುರ, ದಿನೇಶ್ ಹೆಬ್ಬಾಳ ಭಾಗವಹಿಸಿದ್ದರು.

ನಗರದ ಯಲ್ಲಮ್ಮ ದೇವಿ ದೇವಸ್ಥಾನದ ಬಳಿ ಇರುವ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ತುರ್ವಿಹಾಳ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಯೂ ಅದ್ಧೂರಿಯಿಂದ ರಥೋತ್ಸವಗಳು ನಡೆದವು. ಪ್ರತಿನಿತ್ಯದಂತೆ ಎಲ್ಲ ಕಡೆ ಬೆಳಿಗ್ಗೆ ಸುಪ್ರಭಾತ ಸೇವೆ, ಗುರು ರಾಯರ ಉತ್ಸವ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸ್ವಸ್ತಿ ವಾಚನ ಹಾಗೂ ಮಹಾಮಂಗಳಾರತಿ ನಡೆದವು. ರಾಯರ ಮಠದ ವಿಚಾರಣಾಕರ್ತ ರಾಘವೇಂದ್ರ ರಾವ್ ಕುಲಕರ್ಣಿ, ಅರ್ಚಕ ನವೀನ ಆಚಾರ್, ಗುರುರಾಜ ಅಲದಾಳ, ನಾರಾಯಣರಾವ್ ಹೆಬ್ಬಾಳ್, ಕೃಷ್ಣ ಮಲಕಸಮುದ್ರ, ವಾಸುದೇವ ಆಚಾರ್ ಉಪ್ಪಳ, ಅಜಯ್ ಕಾನಿಹಾಳ ಭಾಗವಹಿಸಿದ್ದರು.

ತುರ್ವಿಹಾಳ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ರಥೋತ್ಸವದಲ್ಲಿ ಶೇಷಗಿರಿ ರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಗುರುರಾಜ್ ಕುಲಕರ್ಣಿ ಶ್ರೀಧರ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ ದಢೇಸುಗೂರು ಭಾಗವಹಿಸಿದ್ದರು.

ಮುದಗಲ್‌ನಲ್ಲೂ ರಥೋತ್ಸವ: ಪಟ್ಟಣದ ಕಿಲ್ಲಾದಲ್ಲಿರುವ ತೃತಿಯ ಮಂತ್ರಾಲಯವೆಂದೇ ಕರೆಯಲ್ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರಾಧನೆ ನಿಮಿತ್ತ ರಥೋತ್ಸವ ಸಡಗರ ಸಂಭ್ರಮದಿಂದ ಸೋಮವಾರ ಜರುಗಿತು.

ಶ್ರೀಮಠದಲ್ಲಿ ಬೆಳಗಿನ ಜಾವ ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ವಿವಿಧ ಹೂವಿನ ಅಲಂಕಾರ ಸೇವೆ, ಮಾಡಲಾಗಿತ್ತು.

ಮಹಾ ಮಂಗಳಾರತಿ, ನಡೆಯಿತು. ಮಧ್ಯಾಹ್ನ ರಥೋತ್ಸವ ಜರುಗಿತು. ಯುವಕ ಮಂಡಳಿಯಿಂದ ಭಜನೆ, ಪಲ್ಲಕ್ಕಿ ಸೇವೆ, ನೃತ್ಯ ಸೇವೆ, ತೊಟ್ಟಿಲು ಸೇವೆ, ಮಂಗಳಾರತಿ ಸೇವೆ ಜರುಗಿದವು. ಈ ವೇಳೆ ಶ್ರೀಮಠದ ಅರ್ಚಕರು, ಅಧ್ಯಕ್ಷರು, ಸದಸ್ಯರು, ಸಮಾಜದ ಮುಖಂಡರು,ಮಹಿಳೆಯರು ಇದ್ದರು.