ಸಿಂಧನೂರಿನೆಲ್ಲೆಡೆ ರಂಗಿನಾಟ ಜೋರು

| Published : Mar 27 2024, 01:06 AM IST

ಸಾರಾಂಶ

ವರ್ಷದ ಕೊನೆಯ ಹಬ್ಬವಾದ ಹೋಳಿಯನ್ನು ಜನರು ಬಣ್ಣ ಹಚ್ಚುವ ಮೂಲಕ ಸಂಭ್ರಮಿಸಿದರು.

ಸಿಂಧನೂರು: ಹೋಳಿ ಹಬ್ಬದ ನಿಮಿತ್ತ ನಗರದೆಲ್ಲೆಡೆ ಬಣ್ಣದ ಓಕುಳಿಯಾಟದಲ್ಲಿ ಜನತೆ ಮಂಗಳವಾರ ಮಿಂದೆದ್ದು ಸಂಭ್ರಮಿಸಿದರು.

ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ರಾತ್ರಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಮುಂದಿನ ಆವರಣ, ದೇವರಾಜ ಅರಸು ಮಾರುಕಟ್ಟೆ, ಟಿಎಪಿಎಂಸಿಎಸ್ ಮೈದಾನ, ಹಿರೇಹಳ್ಳದ ದಂಡೆ ಮತ್ತಿತರ ಖಾಲಿ ಮೈದಾನಗಳಲ್ಲಿ ಕಾಮಣ್ಣನ ಪ್ರತಿಕೃತಿಯನ್ನು ಇಟ್ಟು ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಕಟ್ಟಿಗೆಗಳನ್ನು ಸುತ್ತ ಇಟ್ಟು ಬೆಂಕಿ ಹಚ್ಚಿ ದಹಿಸಿದರು. ಅದರ ಸುತ್ತಲೂ ಬೊಬ್ಬೆ ಹೊಡೆಯುತ್ತ ಘೋಷಣೆ ಕೂಗಿ ಸಂಭ್ರಮಿಸಿದರು. ಕೆಲವರು ಕಾಮಣ್ಣ ಸುಟ್ಟ ಬೂದಿಯನ್ನು ಮನೆಗೆ ತೆಗೆದುಕೊಂಡು ಹೋದ ದೃಶ್ಯ ಕಂಡು ಬಂದಿತು.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಹೋಳಿ ಹಬ್ಬದ ನಿಮಿತ್ತ ಬಣ್ಣದಾಟ ನಗರದೆಲ್ಲೆಡೆ ಆರಂಭಗೊಂಡಿತು. ಚಿಕ್ಕ ಮಕ್ಕಳು, ಯುವತಿಯರು, ಮಹಿಳೆಯರು ಮನೆಗಳ ಮುಂದೆ ಗುಲಾಮಿ, ಹಸಿರು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದರೆ, ಯುವಕರು ಗುಂಪು ಗುಂಪಾಗಿ ಸ್ನೇಹಿತರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ ಮುಖ ಸೇರಿದಂತೆ ಮೈತುಂಬ ಬಣ್ಣ ಹಚ್ಚಿದರು. ಕೆಲ ಯುವಕರು ಬಣ್ಣ ಹಚ್ಚುವ ಜೊತೆಗೆ ಬಟ್ಟೆ ಹರಿದು, ತಲೆಗೆ ಮೊಟ್ಟೆ ಹೊಡೆದು, ಕೇಕೇ, ಸಿಳ್ಳೆ ಹಾಕಿ ಸಂತಸಪಟ್ಟರು.

ಮಧ್ಯಾಹ್ನ 2 ಗಂಟೆಯವರೆಗೆ ಯುವಕರು ಗುಂಪು ಗುಂಪಾಗಿ ನಗರದ ವಿವಿಧ ಓಣಿಗಳಲ್ಲಿ ಬೈಕ್‌ಗಳ ಸೈಲೆನ್ಸರ್ ಕಿತ್ತಿ ಸಂಚಾರ ನಡೆಸಿದರು. ನಂತರ ಮೈತೊಳೆದುಕೊಳ್ಳಲು ಹಳ್ಳ, ಕಾಲುವೆ, ಹೊಳೆಗಳತ್ತ ಸಾಗಿದರು. ಅವುಗಳಲ್ಲೂ ನೀರಿಲ್ಲದ ವಿಷಯ ತಿಳಿದು ಬಹುತೇಕರು ಮನೆಗಳಲ್ಲಿಯೇ ಮೈತೊಳೆದುಕೊಂಡ ದೃಶ್ಯಗಳು ಕಂಡು ಬಂದಿತು.