ತುಂಗಭದ್ರಾ ಎಡದಂಡೆ ನಾಲೆ ಈ ಭಾಗದ ರೈತರ ಜೀವನಾಡಿಯಾಗಿದೆ. ಆದರೆ ನೀರಿನ ಕೊರತೆಯಿಂದಾಗಿ ಬೆಳೆದ ಬೆಳೆಗಳು ಶೇ.80ರಷ್ಟು ಒಣಗಿ ಹೋಗಿವೆ.
ಕನ್ನಡಪ್ರಭ ವಾರ್ತೆ ಸಿಂಧನೂರು
ತುಂಗಭದ್ರಾ ಎಡದಂಡೆ ನಾಲೆಗೆ ಡಿ.31ರವರೆಗೆ ನೀರು ಪೂರೈಸಬೇಕು ಹಾಗೂ ಪ್ರತಿ ಎಕರೆಗೆ 50,000 ರುಪಾಯಿ ಪರಿಹಾರ ಒದಗಿಸಬೇಕು. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಕರೆ ನೀಡಿದ್ದ ಸಿಂಧನೂರು ಬಂದ್ ಭಾಗಶಃ ಯಶಸ್ವಿಯಾಯಿತು. ಸಿಂಧನೂರು ಬಂದ್ ಕರೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.ತುಂಗಭದ್ರಾ ಎಡದಂಡೆ ನಾಲೆ ಈ ಭಾಗದ ರೈತರ ಜೀವನಾಡಿಯಾಗಿದೆ. ಆದರೆ ನೀರಿನ ಕೊರತೆಯಿಂದಾಗಿ ಬೆಳೆದ ಬೆಳೆಗಳು ಶೇ.80ರಷ್ಟು ಒಣಗಿ ಹೋಗಿವೆ. ಜೋಳದ ಬೆಳೆ ನಕಲಿ ಬೀಜಗಳಿಂದ ಭೂಮಿಯಿಂದ ಮೇಲೆ ಬಂದಿಲ್ಲ. ಬಂದರೂ ಸಹ ತೆನೆ ಕಟ್ಟಿಲ್ಲ. ಹಾಕಿದ ಬೆಳೆಯೆಲ್ಲಾ ನಾಶವಾಗಿವೆ. ಸರ್ಕಾರ ಡಿ.31ರವರೆಗೆ ನೀರು ಕೊಡಲಿ ಇಲ್ಲದಿದ್ದರೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಲಿ ಎಂದು ಅಗ್ರಹಿಸಿದರು.
ಇಡೀ ಜಗತ್ತಿಗೆ ಅನ್ನ ಕೊಡುವ ರೈತರು ನಾವು ದೇವರಿಗೆ ಕೈಮುಗಿಯದಿದ್ದರೂ ಪರವಾಗಿಲ್ಲ ಆದರೆ, ಪ್ರತಿನಿತ್ಯವೂ ಊಟ ಮಾಡುವಾಗ ರೈತರ ಸ್ಮರಣೆ ಮಾಡ ಬೇಕು ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅಂತಹ ರೈತರನ್ನು ಇವತ್ತು ಸರ್ಕಾರ ಕಡೆಗಣಿಸಿ ಹೊಟ್ಟೆಗೆ ಅನ್ನ ಕೊಡುವ ಅನ್ನದಾತರ ಬದುಕನ್ನು ಛಿದ್ರ ಛಿದ್ರ ಮಾಡಲು ಹೊರಟಿದೆ. ‘ರೈತರೇನು ಭಿಕ್ಷೆ ಕೇಳಾಕತ್ತಿಲ್ಲ, ನಿಮ್ಮನ್ನೆಲ್ಲ ಬದುಕಿಸಲಿಕ್ಕೆ ಹೊಟ್ಟೆಗೆ ಅನ್ನ ಬೇಕು. ಅದಕ್ಕೆ ನೀರು ಕೊಡಿ ಎಂದು ಕೇಳಾಕತ್ತೀವಿ’ ದಯವಿಟ್ಟು ರೈತರ ಮನವಿಗೆ ಸ್ಪಂದಿಸಿ ಡಿಸೆಂಬರ್ 31ರವರೆಗೆ ನೀರು ಕೊಡಿ ಎಂದು ಒತ್ತಾಯ ಮಾಡಿದರು.ರಾಜ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ,ರೈತ ಮುಖಂಡ ಶರಣೇಗೌಡ ಗೊರೇಬಾಳ,ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಕೆ. ಆರ್ .ಎಸ್ .ನ ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರ್, ಬಿಜೆಪಿ ಜಿಲ್ಲಾ ರೈತ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ನವಲಕಲ್, ಕಾಂಗ್ರೆಸ್ನ ಡಾ.ನಾಗವೇಣಿ ಪಾಟೀಲ್, ಎಸ್.ದೇವೇಂದ್ರಗೌಡ, ಹೆಚ್.ಎನ್ .ಬಡಿಗೇರ, ನಿರುಪಾದಿ ಗೋಮರ್ಸಿ, ಸಿದ್ದನಗೌಡ ಗೋನವಾರ, ಚಂದ್ರಶೇಖರ ಗೊರೇಬಾಳ, ನಾಗರಾಜ ಪೂಜಾರ್, ಸೇರಿದಂತೆ ಅನೇಕ ರೈತ ಮುಖಂಡರು,ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿಂಧನೂರು ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ವಾಹನ ಸಂಚಾರ ಎಂದಿನಂತೆ ಇತ್ತು.