ದಾವಣಗೆರೆ ಬಿಜೆಪಿ ಗುಂಪುಗಾರಿಕೆಗೆ ಅಂತ್ಯ ಹಾಡಿ

| Published : Oct 31 2025, 01:30 AM IST

ಸಾರಾಂಶ

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗಿದೆ. ತಕ್ಷಣವೇ ಪಕ್ಷದಲ್ಲಿ ಬೇರುಬಿಟ್ಟ ಗುಂಪುಗಾರಿಕೆಗೆ ಅಂತ್ಯ ಹಾಡಿ, ಪಕ್ಷವನ್ನು ಹಳೆಯ ಲಯಕ್ಕೆ ತರುವಂತೆ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಪದಾಧಿಕಾರಿಗಳು, ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರಿಂದ ಜಿಲ್ಲಾ ಕೋರ್‌ ಕಮಿಟಿ ಸಭೆಗೆ ಆಗಮಿಸಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರಿಗೆ ಮನವಿ ಅರ್ಪಿಸಲಾಯಿತು.

- ಆರಗ, ಪ್ರೀತಂ ಗೌಡಗೆ ವಾಜಪೇಯಿ ಅಭಿಮಾನಿ ಬಳಗ, ಹಿರಿಯ ಕಾರ್ಯಕರ್ತರ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗಿದೆ. ತಕ್ಷಣವೇ ಪಕ್ಷದಲ್ಲಿ ಬೇರುಬಿಟ್ಟ ಗುಂಪುಗಾರಿಕೆಗೆ ಅಂತ್ಯ ಹಾಡಿ, ಪಕ್ಷವನ್ನು ಹಳೆಯ ಲಯಕ್ಕೆ ತರುವಂತೆ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಪದಾಧಿಕಾರಿಗಳು, ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರಿಂದ ಜಿಲ್ಲಾ ಕೋರ್‌ ಕಮಿಟಿ ಸಭೆಗೆ ಆಗಮಿಸಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರಿಗೆ ಮನವಿ ಅರ್ಪಿಸಲಾಯಿತು.

ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಉಭಯ ನಾಯಕರ ಮೂಲಕ ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್, ಗೌರವಾಧ್ಯಕ್ಷ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಲಿಂಗರಾಜ ಇತರರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಕಾರ್ಯಕರ್ತರಿಗೆ ಆಗುತ್ತಿರುವ ನೋವಿನ ಬಗ್ಗೆ ಹೇಳಿಕೊಂಡರು.

ಎಂ.ಪಿ.ಕೃಷ್ಣಮೂರ್ತಿ ಪವಾರ್ ಮಾತನಾಡಿ, ಬಿಜೆಪಿಯಲ್ಲಿ ಕೆಲ ನಾಯಕರು ಪಕ್ಷದ ಹಿತಚಿಂತನೆ ಮಾಡದೇ, ಸ್ವಹಿತಾಶಕ್ತಿ, ಬಲವರ್ಧನೆಗೆ ತಮ್ಮದೇ ಗುಂಪು ಕಟ್ಟಿಕೊಂಡು ಹಾನಿ ಮಾಡುತ್ತಿದ್ದಾರೆ. ಶೀಘ್ರವೇ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿವೆ. ಇವು ಕಾರ್ಯಕರ್ತರ ಚುನಾವಣೆಗಳು. ಪಕ್ಷದ ಶಕ್ತಿಯಾದ ಕಾರ್ಯಕರ್ತರಿಗೆ ಶಕ್ತಿ ತುಂಬುವಂತಹ ಚುನಾವಣೆ. ಸ್ಥಳೀಯ ಸಂಸ್ಥೆಗಳಿಗೆ ಪಕ್ಷ, ಕಾರ್ಯಕರ್ತರನ್ನು ಸಜ್ಜುಗೊಳಿಸದೇ ತಮ್ಮದೇ ಪ್ರತಿಷ್ಠೆಯ ನಡವಳಿಕೆಗಳಿಂದ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.

ಪಕ್ಷದ ರಾಜ್ಯ ನಾಯಕರು, ರಾಷ್ಟ್ರೀಯ ವರಿಷ್ಠರು ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಗುಂಪುಗಾರಿಕೆ ಮಾಡಿ, ಪಕ್ಷ ದುರ್ಬಲಗೊಳಿಸುತ್ತಿರುವವರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಮೊದಲು ಶಿಸ್ತು ಕ್ರಮ ಕೈಗೊಳ್ಳಬೇಕು. ಸದ್ಯದಲ್ಲಿ ವಿಧಾನ ಪರಿಷತ್‌ ಚುನಾವಣೆ ನಡೆಯಲಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿಯವರು ಸಾವಿರಾರು ಸಂಖ್ಯೆ ಮುಖಂಡರು, ಕಾರ್ಯಕರ್ತರ ಪಡೆಯೇ ಪಕ್ಷಕ್ಕೆ ಇದೆ. ಅಂತಹವರಿಗೆ ಗುರುತಿಸಿ, ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕವಾಗಿ 2 ವರ್ಷವಾದರೂ ಇದುವರೆಗೂ ಯಾವುದೇ ಜಿಲ್ಲಾ, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ ಮಾಡಿಲ್ಲ. ಇದು ಜಿಲ್ಲಾ ಸಮಿತಿಯ ಅಸಮರ್ಥತೆ ತೋರಿಸುತ್ತದೆ. ಇಷ್ಟೊಂದು ವಿಳಂಬ ಏಕೆಂಬುದಕ್ಕೂ ಉತ್ತರವಿಲ್ಲ. ಆದಷ್ಟು ಬೇಗ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡಂತೆ ವಿವಿಧ ಮಂಡಲ, ಮೋರ್ಚಾಗೆ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಆರಗ ಜ್ಞಾನೇಂದ್ರ, ಪ್ರೀತಂ ಗೌಡ, ದಾವಣಗೆರೆ ಜಿಲ್ಲೆಯ ಕುರಿತಂತೆ ನೀವು ಸಲ್ಲಿಸಿದ ಮನವಿಯನ್ನು ವರಿಷ್ಠರ ಗಮನಕ್ಕೆ ತರುತ್ತೇವೆ. ಇನ್ನು ಸ್ವಲ್ಪ ದಿನ ಕಾಯುವಂತೆ ಪ್ರತಿಕ್ರಿಯಿಸಿದರು.

ಈ ವೇಳೆ ಬಳಗದ ಕೋಶ್ಯಾಧ್ಯಕ್ಷ ಲಿಂಗರಾಜ ಗೌಳಿ, ಸದಸ್ಯರಾದ ಸಿದ್ದಣ್ಣ ಮಾಲತೇಶ ಗುಪ್ತ, ರಾಮಚಂದ್ರ ವಾದ್ವಾನಿ, ಪಿ.ಎನ್.ಜಗದೀಶ ಕುಮಾರ ಪಿಸೆ ಇತರರು ಇದ್ದರು.

- - -

-30ಕೆಡಿವಿಜಿ3: