ಸಾರಾಂಶ
ರಾಮಮೂರ್ತಿ ನವಲಿಗಂಗಾವತಿ:
13ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮ್ಮೇಳನದ ವೇದಿಕೆ, ಮಳಿಗೆ ನಿರ್ಮಾಣ ಸೇರಿದಂತೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಮಾ. 27, 28ರಂದು ನಡೆಯುವ ಸಮ್ಮೇಳನಕ್ಕೆ ನಗರವು ಶೃಂಗಾರಗೊಂಡಿದೆ. ಪ್ರಮುಖ ವೃತ್ತ ಹಾಗೂ ರಸ್ತೆಗಳನ್ನು ತಳಿರು-ತೋರಣ, ಕನ್ನಡ ಧ್ವಜಗಳಿಂದ ಸಿಂಗರಿಸಲಾಗಿದೆ.ಸಾಹಿತ್ಯಾಸಕ್ತರ ಸ್ವಾಗತಕ್ಕಾಗಿ ವಿವಿಧ ಸಮಿತಿ ರಚಿಸಿದ್ದು ಸಿದ್ಧತೆ ಕೈಗೊಂಡಿವೆ. ಸಮ್ಮೇಳನಕ್ಕೆ ಬರುವ ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ಯಾವುದೇ ಕೊರತೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, 16 ಮಹಾದ್ವಾರ ನಿರ್ಮಿಸಲಾಗಿದೆ.
ಮುಖ್ಯ ವೇದಿಕೆಗೆ ದಿ. ಶ್ರೀರಂಗದೇವರಾಯಲು ಹೆಸರಿಟ್ಟಿದ್ದು ಗುರುವಾರ ಶಾಸಕ ಜನಾರ್ದನ ರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9ಕ್ಕೆ ಗಂಗಾವತಿಯ ಎಪಿಎಂಸಿ ಆವರಣದಿಂದ ನಾಡದೇವಿ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಅವರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯ ರಂಗು ಹೆಚ್ಚಿಸಲು ವಿವಿಧ ಭಾಗಗಳಿಂದ 30ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಲಿವೆ.ಮೆರವಣಿಗೆಯ ನಂತರ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ನಾನಾ ಲೇಖಕರ ಪುಸ್ತಕಗಳ ಬಿಡುಗಡೆ ಸೇರಿದಂತೆ ಗೋಷ್ಠಿಗಳು ನಡೆಯಲಿವೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ ಮಡಿವಾಳರ ತಿಳಿಸಿದ್ದಾರೆ.
ಬೃಹತ್ ವೇದಿಕೆ ನಿರ್ಮಾಣ:ಸಮ್ಮೇಳನಕ್ಕೆ 40 ಅಡಿ ಉದ್ದ ಹಾಗೂ 60 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಏಕಕಾಲಕ್ಕೆ ವೇದಿಕೆಯಲ್ಲಿ 50ಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದು ವೇದಿಕೆ ಮುಂಭಾಗದಲ್ಲಿ 200ಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳಲು ವಿಶೇಷ ಆಸನಗಳ ವ್ಯವಸ್ಥೆ ಹಾಗೂ 5 ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳುವ ವಿಶಾಲವಾದ ವ್ಯವಸ್ಥೆ ಮಾಡಲಾಗಿದೆ.
ಊಟದ ವ್ಯವಸ್ಥೆ:ಸಮ್ಮೇಳನಕ್ಕೆ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇರುವುದರಿಂದ 5 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಗುರುವಾರ ಬೆಳಗ್ಗೆ 2 ಸಾವಿರ ಜನರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ 5 ಸಾವಿರ ಜನರಿಗೆ ಗೋಧಿ ಹುಗ್ಗಿ, ಅನ್ನ, ಸಾಂಬಾರು, ಅನ್ನ ಮಜ್ಗಿಗೆ ನೀಡಲಾಗುತ್ತಿದೆ. ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ರುದ್ರೇಶ ಆರಾಳ ತಿಳಿಸಿದ್ದಾರೆ.