ಪ್ರತಿ ಸದನದಲ್ಲಿಯೂ ಸಿಂಗಾಟಾಲೂರು ಏತ ನೀರಾವರಿಯ ಕಾಲುವೆ, ಗೇಟ್‌ ದುರಸ್ತಿ ಹಾಗೂ ರೈತರಿಗೆ ನೀಡುವ ಪರಿಹಾರ ಕುರಿತು ಚರ್ಚೆಸಿದ್ದೇನೆ.

ಹೂವಿನಹಡಗಲಿ: ಈ ಭಾಗದ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ, ಬ್ಯಾರೇಜಿನ ಗೇಟ್‌ಗಳ ದುರಸ್ತಿ ಕಾರ್ಯ ಬೇಗನೇ ಪೂರ್ಣಗೊಳಿಸಬೇಕೆಂದು ಶಾಸಕ ಕೃಷ್ಣನಾಯ್ ಹೇಳಿದರು.

ಇಲ್ಲಿನ ತಾಪಂ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಜರುಗಿದ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಸದನದಲ್ಲಿಯೂ ಸಿಂಗಾಟಾಲೂರು ಏತ ನೀರಾವರಿಯ ಕಾಲುವೆ, ಗೇಟ್‌ ದುರಸ್ತಿ ಹಾಗೂ ರೈತರಿಗೆ ನೀಡುವ ಪರಿಹಾರ ಕುರಿತು ಚರ್ಚೆಸಿದ್ದೇನೆ. ಈ ಹಿನ್ನೆಲೆಯಲ್ಲಿ ಈಗ ಪ್ರಗತಿಯಲ್ಲಿರುವ ಗೇಟ್‌ ದುರಸ್ಥಿ ಬೇಗ ಪೂರ್ಣಗೊಳಿಸಬೇಕೆಂದು ಹೇಳಿದರು.

ಯೋಜನೆಯ ಕಾಲುವೆ, ಪೈಪ್‌ಲೈನ್‌ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ರೈತರ ಜಮೀನು ಭೂ ಸ್ವಾಧೀನವಾಗಿದೆ. ಈ ಕುರಿತು ರೈತರಿಗೆ ಪರಿಹಾರ ನೀಡಲು ಅದಕ್ಕೆ ಉಪ ನೋಂದಣಿ ಇಲಾಖೆ, ಸರ್ವೇಯರ್‌, ತೋಟಗಾರಿಕೆ ಇಲಾಖೆಯಿಂದ ನಮಗೆ ಸಕಾಲದಲ್ಲಿ ಮಾಹಿತಿ ಸಿಗುತ್ತಿಲ್ಲ. ಪರಿಹಾರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಯೋಜನೆಯ ಇಇ ಶಿವಮೂರ್ತಿ ಸಭೆಯ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಶಾಸಕ ಕೃಷ್ಣನಾಯ್ಕ, ವಾರದೊಳಗೆ ವಿವಿಧ ಇಲಾಖೆಗಳು ತಾವು ನೀಡಬೇಕಿರುವ ಮಾಹಿತಿ ನೀಡಬೇಕು. ಇನ್ನು ವಿಳಂಬವಾದರೆ ನನ್ನ ಗಮನಕ್ಕೆ ತರಬೇಕು. ಜತೆಗೆ ಇನ್ನು ಬಾಕಿ ಉಳಿದಿರುವ ಕೆರೆ ತುಂಬಿಸುವ ಪೈಪ್‌ಲೈನ್‌ ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು. ಕಾಲಹರಣ ಮಾಡಿದರೆ ನೀವೇ ಜವಾಬ್ದಾರರು. ಎಲ್ಲ ಇಲಾಖೆಗಳ ಅಧಿಕಾರಿಗಳು ಬೆಳಿಗ್ಗೆ ಕಚೇರಿಗೆ ಬಂದು ಸಂಜೆಗೆ ಹೋದರೆ ಸ್ಥಳೀಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಬೇಕೆಂದು ಪ್ರಶ್ನಿಸಿದರು.

ತಾಲೂಕಿಗೆ ಮೌಲಾನ ಅಜಾದ್‌ ಮಾದರಿ ವಸತಿ ಶಾಲೆ ಮಂಜೂರಾಗಿದೆ. ಇದನ್ನು ಇದೇ ವರ್ಷದಲ್ಲೇ ಆರಂಭಿಸಲಾಗಿದೆ. ಕಟ್ಟಡ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ನಿವೇಶನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹುಲಿಗುಡ್ಡ ಹತ್ತಿರದ 40 ಎಕರೆ ಸರ್ಕಾರಿ ಜಾಗ ಪಡೆದು ಉತ್ತಮ ಶಾಲೆ ನಿರ್ಮಾಣ ಮಾಡಲಾಗುವುದು ಎಂದರು.

ಎಪಿಎಂಸಿ ಮೂಲಕ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. ಈಗ 7800 ಕ್ವಿಂಟಲ್‌ ಖರೀದಿಸಿದೆ ಎಂದು ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ಹೇಳಿದರು.

ಮೈಲಾರ ಸಕ್ಕರೆ ಕಾರ್ಖಾನೆಯವರು ₹2.30 ಕೋಟಿ ಮೌಲ್ಯದ ಮೆಕ್ಕೆಜೋಳ ಖರೀದಿ ಮಾಡಬೇಕೆಂಬ ಗುರಿ ನಿಗದಿ ಇದೆ. ಆದರೆ ಕಾರ್ಖಾನೆಯವರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆಂದು ಅಬಕಾರಿ ಅಧಿಕಾರಿ ಸಿದ್ದೇಶ ನಾಯ್ಕ ಸಭೆಗೆ ಮಾಹಿತಿ ನೀಡಿದಾಗ, ಈ ಕುರಿತು ಕೃಷಿ, ಅಬಕಾರಿ, ಎಪಿಎಂಸಿ ಅಧಿಕಾರಿಗಳು ಸೇರಿ ಸಭೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಜಿ.ಪರಮೇಶ್ವರ, ತಹಸೀಲ್ದಾರ್‌ ಗುರುಬಸವರಾಜ ಉಪಸ್ಥಿತರಿದ್ದರು.

ಪೊಲೀಸರು ನಿಗಾ ಇಡಲಿ: ಹೂವಿನಹಡಗಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್‌, ವಾಹನಗಳ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೂಡಲೇ ಅಂತಹ ವಾಹನಗಳ ಮಾಲೀಕರಿಗೆ ದಂಡ ಹಾಕಿ, ವಸೂಲಿ ಮಾಡುವ ಜತೆಗೆ ಕೇಸ್‌ ದಾಖಲಿಸಬೇಕೆಂದು ಪಿಎಸ್‌ಐ ಮಣಿಕಂಠ ಅವರಿಗೆ ಸೂಚಿಸಿದರು.

ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ. ಇದರಿಂದ ಪೊಲೀಸರು ನಿಗಾ ಇರಬೇಕು. ಆಯ್ದ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಬೀದಿ ಬದಿ ವ್ಯಾಪಾರಸ್ಥರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಪೊಲೀಸರಿಗೆ ಸೂಚಿಸಿದರು.