ಸಾರಾಂಶ
ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ಸುಕ್ಷೇತ್ರದಲ್ಲಿ ಇಲ್ಲಿನ ದೇವಸ್ಥಾನ ಟ್ರಸ್ಟ್ ಕಮಿಟಿ ಗೊಟಗೋಡಿಯ ರಾಕ್ ಗಾರ್ಡನ್ ಮಾದರಿಯಲ್ಲಿ ದೇವಸ್ಥಾನದ ಎದುರಿನ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ 2 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ವೀರಭದ್ರೇಶ್ವರ ಉದ್ಯಾನವನ ನಿರ್ಮಿಸಿದ್ದು, ಜ.29ರಂದು ಉದ್ಘಾಟನೆಗೆ ಸಿದ್ಧಗೊಂಡಿದೆ.
ಶರಣು ಸೊಲಗಿಕನ್ನಡಪ್ರಭ ವಾರ್ತೆ ಮುಂಡರಗಿ
ಉತ್ತರ ಕರ್ನಾಟಕದ ಹೆಸರಾಂತ ದೇವಾಲಯಗಳಲ್ಲಿ ಒಂದಾಗಿರುವ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ಸುಕ್ಷೇತ್ರದಲ್ಲಿ ಇಲ್ಲಿನ ದೇವಸ್ಥಾನ ಟ್ರಸ್ಟ್ ಕಮಿಟಿ ಗೊಟಗೋಡಿಯ ರಾಕ್ ಗಾರ್ಡನ್ ಮಾದರಿಯಲ್ಲಿ ದೇವಸ್ಥಾನದ ಎದುರಿನ ಸುಮಾರು 2 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ 2 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಸುಂದರವಾದ ಶ್ರೀವೀರಭದ್ರೇಶ್ವರ ಉದ್ಯಾನ ವನ ನಿರ್ಮಿಸಿದ್ದು, ಇದೇ ಜ.29 ರಂದು ಉದ್ಘಾಟನೆಗೆ ಸಿದ್ಧಗೊಂಡಿದೆ. ಈ ದೇವಸ್ಥಾನಕ್ಕೆ ರಾಜ್ಯಾದ್ಯಂತ ಭಕ್ತರಿದ್ದು, ಎಲ್ಲ ಭಕ್ತರ ಸಹಾಯ ಸಹಕಾರದಿಂದ ಈಗಿರುವ ದೇವಸ್ಥಾನ ಟ್ರಸ್ಟ್ ಕಮಿಟಿಯವರು 2018ರಲ್ಲಿ ಹಳೆಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಕಲ್ಲಿನ ಬೃಹತ್ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಜನಮನ್ನಣೆಗೆ ಪಾತ್ರವಾಗಿತ್ತು. ನಂತರ ಭದ್ರಕಾಳಮ್ಮನ ದೇವಸ್ಥಾನ, ಅದಾದ ನಂತರ ಈಶ್ವರ ದೇವಸ್ಥಾನ ನಿರ್ಮಾಣ ಮಾಡಿಸಿದರು. ಇವೆಲ್ಲವೂ ಆಗುತ್ತಿದ್ದಂತೆಯೇ ಇಲ್ಲೊಂದು ಸುಂದರವಾದ ಉದ್ಯಾನವನ ಮಾಡಬೇಕೆನ್ನುವ ಉದ್ದೇಶದಿಂದ ಕಳೆದ 3 ವರ್ಷಗಳಿಂದ ಈ ಕಾರ್ಯ ಪ್ರಾರಂಭಿಸಿದ್ದರು. ಇದೀಗ ಈ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಉದ್ಯಾನವನದಲ್ಲಿ ವೀರಭದ್ರನು ದಕ್ಷಬ್ರಹ್ಮನನ್ನು ಹತ್ಯಗೈದ ಚಿತ್ರ, ದಕ್ಷನಿಗೆ ಕುರಿಯ ತಲೆಯನ್ನಿಟ್ಟ ಚಿತ್ರ, ಆಂಜನೇಯನಿಗೆ ಲಿಂಗದೀಕ್ಷೆ ನೀಡಿದ ಚಿತ್ರ, ಸತಿಯ ನಿಧನದ ನಂತರ ಜರುಗುವ ಪಾರ್ವತಿ ಕಲ್ಯಾಣ, ಆಕಳು ಹುತ್ತಕ್ಕೆ ಹಾಲು ಎರೆಯುವ ವೀರಭದ್ರೇಶ್ವರನ ಚರಿತ್ರೆಯನ್ನೊಳಗೊಂಡಿರುವ ಚಿತ್ರಗಳನ್ನು ಕಲಾವಿದರು ತುಂಬಾ ಸೊಗಸಾಗಿ ತಯಾರಿಸಿದ್ದಾರೆ. ಸುಮಾರು 300 ಮೀಟರ್ ಉದ್ದದ ಗುಹೆಯನ್ನು ನಿರ್ಮಿಸಿದ್ದು, ಅದರಲ್ಲಿ ವಿವಿಧ ಸಾಧು, ಸಂತರು 24 ರೀತಿಯ ವಿವಿಧ ಬಂಗಿಯ ಯೋಗಾಸನಗಳನ್ನು ಮಾಡುತ್ತಿರುವ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಉದ್ಯಾನ ವನದಲ್ಲಿ ಒಟ್ಟು 299 ಮೂರ್ತಿಗಳೊಳಗೊಂಡ ಚಿತ್ರಾವಳಿಗಳಿದ್ದು, ಹಳ್ಳಿ ಬದುಕಿನ ಜೀವನ ಶೈಲಿಯ ಗೌಡರ ಮನೆ, ಬಂಕದ ಮನೆ, ಆಗಿನ ಶಾಲೆ, ವೀರಭದ್ರ ದೇವರಿಗೆ ಗುಗ್ಗಳ ಹೊರಟಿರುವ ದೃಶ್ಯ, ಸ್ನಾನ ಗೈಯುತ್ತಿರುವ ಆವರಣ, ದನಗಳನ್ನು ಕಾಯುವುದು, ಶೆಟ್ಟರ ಅಂಗಡಿಯಲ್ಲಿನ ವ್ಯಾಪಾರ, ನೂಲುವುದು, ಗಾದೆ ಹಾಕುವುದು, ಆಕಳ ಹಿಂಡುವುದು, ದಿನ ಬಳಕೆಯ ಸಾಮಾನುಗಳನ್ನು ಖರೀದಿಸುವ ಸಂತೆ, ಗ್ರಾಮೀಣ ಮಕ್ಕಳು ವೀಕ್ಷಿಸುತ್ತಿದ್ದ ಗರ್ದಿಗಮ್ಮತ್ತು ಹೀಗೆ ಹತ್ತು-ಹಲವಾರು ದೃಶ್ಯಗಳನ್ನು ನೈಜತೆಯಿಂದ ನಿರ್ಮಾಣ ಮಾಡಿ ಕಲಾವಿದರು ಅವುಗಳಲ್ಲಿ ಜೀವಂತಿಕೆ ತುಂಬಿ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನದ ಮೂಲಕ ದಿ.ಡಾ.ಟಿ.ಬಿ. ಸೊಲಬಕ್ಕನವರ ಶಿಷ್ಯರಾದ ಮೌನೇಶ ಬಡಿಗೇರ, ಅಶೋಕ ತಳವಾರ, ಮಂಜು ಗೋಕಾಕ, ದುರುಗೇಶ ತುಮಕೂರು, ಸೋಮಶೇಖರ ತುಮಕೂರು ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ನಿರ್ಮಿಸಿರುವ ಎಲ್ಲ ಮೂರ್ತಿಗಳನ್ನು ಸಿಮೆಂಟಿನಿಂದ ತಯಾರಿಸಿದ್ದು, ಮೂರ್ತಿಗಳಿಗೆ ಆಕರ್ಷಕವಾದ ಬಣ್ಣ ಬಳಿದಿದ್ದು, ಎಲ್ಲ ಮೂರ್ತಿಗಳು ಸಹಜ ಸೌಂದರ್ಯದಿಂದ ಎದ್ದು ಕಾಣುತ್ತಲಿವೆ. ಮೂರ್ತಿಗಳ ಕೆಳಗೆ ನೈಸರ್ಗಿಕವಾಗಿ ಹುಲ್ಲು ಹಾಗೂ ಮತ್ತಿತರ ಆಕರ್ಷಕ ಗಿಡ, ಗಂಟೆಗಳನ್ನು ಬೆಳೆಸಿರುವುದರಿಂದ ಉದ್ಯಾನ ವನ ಹಸುರಿನಿಂದ ಕಂಗೊಳಿಸುವಂತಾಗಿದೆ. ಇಡೀ ಉದ್ಯಾನ ವನದುದ್ದಕ್ಕೂ ಅಲ್ಲಲ್ಲಿ ಬೇವು, ನಾಗಪುಷ್ಪ, ಹಲಸು, ನೀರಲೆ ಸೇರಿದಂತೆ ವಿವಿಧ ಮರಗಳನ್ನು ಹಚ್ಚಿರುವುದು ಆಕರ್ಷಣೆಯನ್ನು ಹೆಚ್ಚಿಸಿದೆ.ಕಪ್ಪತ್ತ ಗುಡ್ಡದ ಸೆರಗಿನಲ್ಲಿ ತುಂಗಭದ್ರಾ ನದಿಯ ದಂಡೆಯಲ್ಲಿರುವ ಈ ಸಿಂಗಟಾಲೂರು ಸುಕ್ಷೇತ್ರಕ್ಕೆ ಪ್ರತಿ ವರ್ಷ ಮಕರ ಸಂಕ್ರಾಂತಿ, ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂದರ್ಭ, ಕಾರ್ತಿಕ ಮಾಸವೂ ಸೇರಿದಂತೆ ಈ ದೇವಸ್ಥಾನಕ್ಕೆ ವರ್ಷದ 12 ತಿಂಗಳೂ ಸಹ ಭಕ್ತ ಸಾಗರ ಹರಿದು ಬರುತ್ತಿದ್ದು, ಉದ್ಯಾನ ವನವನ್ನು ನೋಡಲು ಸಾರ್ವಜನಿಕರು ಕಾತುರರಾಗಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಇದೊಂದು ಪ್ರೇಕ್ಷಣೀಯ ಪ್ರವಾಸಿ ಸ್ಥಳವಾಗಿದ್ದು, ಸರ್ಕಾರ ಇಲ್ಲಿ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಮೂಲಕ ಇನ್ನಷ್ಟು ಅಭಿವೃದ್ಧಿಗೊಳಿಸಿ ಇದನ್ನೊಂದು ಸುಂದರ ಪ್ರವಾಸಿ ಸ್ಥಳವನ್ನಾಗಿ ಮಾಡಬೇಕೆನ್ನುವುದು ಇಲ್ಲಿನ ಪರಿಸರ ಪ್ರಿಯರ ಒತ್ತಾಯವಾಗಿದೆ.
ಇಲ್ಲಿನ ದೇವಸ್ಥಾನದ ಜೀರ್ಣೋದ್ಧಾರವೂ ಸೇರಿದಂತೆ ಈಗಿನ ಉದ್ಯಾನವನ ನಿರ್ಮಾಣದವರೆಗೂ ಸಂಪೂರ್ಣವಾಗಿ ರಾಜ್ಯಾದ್ಯಂತ ಇರುವ ಶ್ರೀ ವೀರಭದ್ರೇಶ್ವರನ ಭಕ್ತರು ತನು, ಮನ, ಧನದಿಂದ ಸಹಾಯ, ಸಹಕಾರ ನೀಡುತ್ತಾ ಬಂದಿದ್ದಾರೆ. ಅವರೆಲ್ಲರೂ ಕೊಟ್ಟಿರುವ ಕಾಣಿಕೆಯನ್ನು ಸದುಪಯೋಗ ಮಾಡಿಕೊಂಡು ನಮ್ಮ ಕಮಿಟಿಯ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ನಂತರದಲ್ಲಿ ಇಲ್ಲೊಂದು ತೂಗು ಸೇತುವೆ, ನಮಿಲು ಧಾಮ ಸೇರಿದಂತೆ ವಿವಿಧ ಕಾಮಗಾರಿ ಮಾಡಲು ಯೋಚಿಸಿದ್ದು, ಪ್ರವಾಸೋಧ್ಯಮ ಇಲಾಖೆಯಿಂದ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳುತ್ತಾರೆ.