ಸಾರಾಂಶ
ಕೆಜಿಎಫ್: ನಕಲಿ ಪೇಮೆಂಟ್ ಆಫ್ ಬಳಸಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಠಾಣೆಯ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸಿ, ಸುಮಾರು ೩.೨೫ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ವರ್ಧಮಾನ್ ಜ್ಯೂವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಹೋಗಿ ನಕಲಿ ಆಪ್ ಮತ್ತು ನಕಲಿ ಸಿಮ್ ಬಳಸಿ ಪೇಮೆಂಟ್ ಆಗಿರುವುದಾಗಿ ತೋರಿಸಿ ವಂಚಿಸಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಇಎನ್ ಪಿಐ ಲಕ್ಷ್ಮೀನಾರಾಯಣ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ನಂದನ್ ಮತ್ತು ದೇವನಹಳ್ಳಿಯ ಗಿರೀಶ್.ಕೆ. ರನ್ನು ಬಂಧಿಸಿ ಅವರಿಂದ ಸುಮಾರು ೨೪ ಗ್ರಾಂ ತೂಕದ ಬಂಗಾರದ ಚೈನು ಮತ್ತು ಎರಡು ಬಂಗಾರದ ಉಂಗುರಗಳು ಹಾಗೂ ಎರಡು ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಿದ ಕಾರು ಸೇರಿ ೩.೨೫ ಲಕ್ಷ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎನ್ ಕ್ರೈಂ ಠಾಣೆಯ ಪಿಐ ಲಕ್ಷ್ಮೀನಾರಾಯಣ, ಸಿಬ್ಬಂದಿ ಎಂ.ವಿ.ರಮೇಶ, ರಘುನಾಥ, ವಿ.ಶೇಷಾದ್ರಿ, ಚೇತನ್ ಯಾದವ್, ಚೇತನ್ ಕುಮಾರ್, ಶರಣಕುಮಾರ್ ತಂಡದ ಕಾರ್ಯವೈಖರಿಗೆ ಕೆಜಿಎಫ್ ಎಸ್‌ಪಿ ಕೆ.ಎಂ. ಶಾಂತರಾಜು ಪ್ರಶಂಶಿಸಿದ್ದಾರೆ.
------