‘ಪ್ರಕೃತಿ’ ಉತ್ಪನ್ನದ ಜೊತೆ ಹಾಡಿ ಮಹಿಳೆಯರ ಹಾಡುಪಾಡು

| Published : Nov 30 2024, 12:51 AM IST

‘ಪ್ರಕೃತಿ’ ಉತ್ಪನ್ನದ ಜೊತೆ ಹಾಡಿ ಮಹಿಳೆಯರ ಹಾಡುಪಾಡು
Share this Article
  • FB
  • TW
  • Linkdin
  • Email

ಸಾರಾಂಶ

‘ಪ್ರಕೃತಿ ಫುಡ್ ಪ್ರಾಡಕ್ಟ್ಸ್ ಹೆಸರಿನಲ್ಲಿ ಗೆಣಸಿನ ಚಿಪ್ಸ್‌ತಯಾರಿಕೆ, ಬಾಳೆಕಾಯಿ ಚಿಪ್ಸ್‌ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಗ್ರಾಮದ ಪಲ್ಲವಿ, ರತ್ನಮ್ಮ, ಹಲಗಮ್ಮ, ಮಹದೇವಿ, ಪುಷ್ಪಾ, ಮಂಜುಳಾ, ಮದ್ದೂರಮ್ಮ, ಮಹದೇವಿ ಮತ್ತು ಶಿಲ್ಪಾ ಅವರ ತಂಡವು ಈ ಕಾರ್ಯದಲ್ಲಿ ತೊಡಗಿದೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಟೈಟಾನ್‌ ಕಂಪನಿ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ಅಣ್ಣೂರು ಹಾಡಿಯ ಹಲವು ಮಹಿಳಿಯರಿಗೆ ಚಿಪ್ಸ್ ಉತ್ಪಾದನಾ ಘಟಕ ಆರಂಭಿಸಲು ನೆರವಾಗಿದೆ.

‘ಪ್ರಕೃತಿ ಫುಡ್ ಪ್ರಾಡಕ್ಟ್ಸ್ ಹೆಸರಿನಲ್ಲಿ ಗೆಣಸಿನ ಚಿಪ್ಸ್‌ತಯಾರಿಕೆ, ಬಾಳೆಕಾಯಿ ಚಿಪ್ಸ್‌ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಗ್ರಾಮದ ಪಲ್ಲವಿ, ರತ್ನಮ್ಮ, ಹಲಗಮ್ಮ, ಮಹದೇವಿ, ಪುಷ್ಪಾ, ಮಂಜುಳಾ, ಮದ್ದೂರಮ್ಮ, ಮಹದೇವಿ ಮತ್ತು ಶಿಲ್ಪಾ ಅವರ ತಂಡವು ಈ ಕಾರ್ಯದಲ್ಲಿ ತೊಡಗಿದೆ.

ಸುತ್ತಮುತ್ತಲ ಪಟ್ಟಣಗಳ ಅಂಗಡಿ ಮಳಿಗೆಗಳು, ಮೈಸೂರು, ಬೆಂಗಳೂರು, ದೆಹಲಿ ಮತ್ತು ಜಾರ್ಖಂಡ್‌ಗೆ ಇಲ್ಲಿ ತಯಾರಿಸಿದ ಚಿಪ್ಸ್‌ ಕಳುಹಿಸಲಾಗುತ್ತದೆ.

ಬುಡಕಟ್ಟು ಮೇಳ, ವಸ್ತು ಪ್ರದರ್ಶನಗಳು ನಡೆದಾಗ ಇದೇ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ.

ಟೈಟಾನ್ ಕಂಪನಿಯ ಆರ್ಥಿಕ ನೆರವು ಮತ್ತು ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್ ನ ಸಹಕಾರದೊಡನೆ ಬಾಳೆಕಾಯಿ ಮತ್ತು ಗೆಣಸು ಶುದ್ಧಗೊಳಿಸುವ ಯಂತ್ರ, ಸ್ಲೈಸ್ ಮಾಡುವ ಯಂತ್ರ, ಪ್ಯಾಕಿಂಗ್‌ಯಂತ್ರ ಖರೀದಿಸಿ ತಾವೇ ರೈತರಿಂದ ನೇರವಾಗಿ ಬಾಳೆಕಾಯಿ, ಗೆಣಸು ಖರೀದಿಸಿ ತಂದು ಚಿಪ್ಸ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗರಿಗರಿಯಾದ ರುಚಿಕಟ್ಟಾದ, ಹೆಚ್ಚು ಜಿಡ್ಡು ಇಲ್ಲದ ಚಿಪ್ಸ್‌ ತಯಾರಿಕೆಯಲ್ಲಿ ಪಲ್ಲವಿ ಅವರ ತಂಡ ತೊಡಗಿದೆ. ಮೂರ್ನಾಲ್ಕು ದಿನದ ತರಬೇತಿ ಪಡೆದು ಈ ಕಾರ್ಯ ಆರಂಭಿಸಿದ್ದು, ಒಮ್ಮೆಗೆ 500 ರಿಂದ 600 ಕೆಜಿ ಅಷ್ಟು ಬಾಳೆ ಕಾಯಿ ಖರೀದಿಸಿ ಅದನ್ನು ಸಂಸ್ಕರಿಸಿ, ಸ್ಲೈಸ್ ಮಾಡಿ ಎಣ್ಣೆಯಲ್ಲಿ ಕರಿದು ಪ್ಯಾಕಿಂಗ್‌ ಮಾಡಲಾಗುತ್ತದೆ. ತಾವೇ ಉತ್ಪಾದಿಸಿದ ವಸ್ತುಗಳನ್ನು ನಾವೇ ಮಾರಾಟ ಮಾಡಿ ಬಂದ ಲಾಭವನ್ನು ಪ್ರಕೃತಿ ಆದಿವಾಸಿ ಉತ್ಪಾದಕರ ಸಂಘಕ್ಕೆ ಜಮೆ ಮಾಡಿ ಬಂದ ಲಾಭದಲ್ಲಿ ಎಲ್ಲರೂ ವೇತನ ಪಡೆಯುತ್ತಿರುವುದಾಗಿ ಅವರು ವಿವರಿಸಿದರು.

ಈ ಮುಂಚೆ ನಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಒಂದು ದಿನ ಸಿಕ್ಕರೆ ಮತ್ತೊಂದು ದಿನ ಕೂಲಿ ಸಿಗುತ್ತಿರಲಿಲ್ಲ. ವರ್ಷದಲ್ಲಿ ಆರು ತಿಂಗಳು ಮಾತ್ರ ಕೂಲಿ ಸಿಗುತ್ತಿತ್ತು. ಇಲ್ಲವೇ ಪಿರಿಯಾಪಟ್ಟಣ, ಕೊಡಗು ಭಾಗಕ್ಕೆ ವಲಸೆ ಹೋಗಬೇಕಿತ್ತು. ಈಗ ಈ ಉತ್ಪಾದನಾ ಘಟಕ ಆರಂಭವಾಗಿರುವುದರಿಂದ ವರ್ಷದ ಎಲ್ಲಾ ದಿನವೂ ಕೆಲಸ ಸಿಗುತ್ತದೆ ಎಂದು ಅವರು ಸಂತಸಪಟ್ಟರು.

ಘಟಕವನ್ನು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ಸಿಇಒ ಎಸ್. ಸವಿತಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಡಿಯಲ್ಲಿ ಪಾಳು ಬಿದಿದ್ದ ರೇಷ್ಮೆ ಇಲಾಖೆಗೆ ಸೇರಿದ ಹಳೆಯ ಕಟ್ಟಡವನ್ನು ದುರಸ್ತಿಪಡಿಸಿಕೊಂಡು ಅಲ್ಲಿಯೇ ಈಗ ಘಟಕ ಆರಂಭಿಸಲಾಗಿದೆ ಎಂದು ವಿವೇಕಾನಂದ ಯೂತ್ ಮೂಮ್‌ಮೆಂಟ್‌ಕಾರ್ಯಕ್ರಮ ಸಂಯೋಜಕ ಶಂಕರ್ ವಿವರಿಸಿದರು.