ಸಾರಾಂಶ
ದೊಡ್ಡಬಳ್ಳಾಪುರ: ಗೀತ ಗಾಯನದ ಹವ್ಯಾಸದಿಂದ ದೇಹದಲ್ಲಿ ಸಹಜವಾದ ನೋವು ನಿವಾರಕಗಳು ಉತ್ಪತ್ತಿಯಾಗಿ ದೈಹಿಕ ಮತ್ತು ಮಾನಸಿಕ ಸಮನ್ವಯ ಸಾಧ್ಯವಾಗುತ್ತದೆ ಎಂದು ಹಲವಾರು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ. ಅದು ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಮಾಡಬಹುದಾದ ಅತ್ಯುತ್ತಮ ವ್ಯಾಯಾಮ ಎಂದು ನಾಗದಳ ಸಂಚಾಲಕ ಸಿ.ನಟರಾಜ್ ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರದ ನಾಗರಕೆರೆ ಕಟ್ಟೆಯ ಆಚೆಗುಡಿ ಆಂಜನೇಯಸ್ವಾಮಿ ದೇವಾಲಯದ ಬಳಿ ಇಲ್ಲಿನ ನಾಗದಳ ಹಾಗೂ ಗಾನಗಂಧರ್ವ ಗಾಯನ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರೌಢಶಾಲಾ ಮಕ್ಕಳ ಜಿಲ್ಲಾಮಟ್ಟದ ಕನ್ನಡ ನಾಡು-ನುಡಿ ಗಾಯನ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಾಡು ಒತ್ತಡ ನಿವಾರಕವಾಗಿ ಕೆಲಸ ಮಾಡಿ ಉತ್ಸಾಹ ತುಂಬಿ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರಾಣಾಯಾಮದಂತೆ ಕೆಲಸ ಮಾಡುವ ಗಾಯನ ಉಸಿರಾಟದ ಸಮಸ್ಯೆಗಳ ನಿವಾರಣೆಗೂ ಸಹಕಾರಿ. ಗಾಯನ ಮಾಡಲು ಅತ್ಯುತ್ತಮ ಗಾಯಕರಾಗಿರಬೇಕೆಂಬುದು ಮಾನದಂಡವಲ್ಲ. ನಮ್ಮ ಆರೋಗ್ಯ ಚೆನ್ನಾಗಿರಬೇಕೆಂಬ ಒಂದು ಉದ್ದೇಶವೇ ಸಾಕು. ಹಿಂದಿನ ಕಾಲದಲ್ಲಿ ರಾಗಿ ಬೀಸುವ, ಅಕ್ಕಿ ಕುಟ್ಟುವ, ಕಣ ಮಾಡುವ, ಹೊಲದಲ್ಲಿ ಕೆಲಸ ಮಾಡುವ ಹಾಗೂ ಇನ್ನಿತರ ಎಲ್ಲ ಕಾಯಕ ನಿರತ ಶ್ರಮಜೀವಿಗಳೂ ತಮ್ಮ ಕಾರ್ಯದ ದಣಿವಿನ ನಿವಾರಣೆಗೆ ತಪ್ಪದೆ ಹಾಡುಗಳನ್ನು ಹಾಡಿಕೊಳ್ಳುತ್ತಿದ್ದರು. ಆ ಮೂಲಕ ಅವರ ದೈಹಿಕ ಮಾನಸಿಕ ಶ್ರಮದ ನೋವೆಲ್ಲ ಮರೆಯಾಗಿ ನಲಿವು ಮನೆಮಾಡುತ್ತಿತ್ತು ಎಂದು ತಿಳಿಸಿದರು.
ನಾಗದಳದ ನುನ್ನಾ ನಾಗರಾಜ್ ಮಾತನಾಡಿ, ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಭಾನುವಾರ ಸ್ಥಳೀಯ ಗಾಯನಾಸಕ್ತರಿಗಾಗಿ ಗಾನೋದಯ ಕಾರ್ಯಕ್ರಮವನ್ನು ಒಂದು ವರ್ಷದಿಂದ ನಿರಂತರವಾಗಿ ನಡೆಸಲಾಗುತ್ತಿದ್ದು, ಎಲ್ಲ ವಯೋಮಾನದ ಗಾಯನಾಸಕ್ತರು ವೇದಿಕೆಯ ಸದುಪಯೋಗ ಪಡೆಯುತ್ತಿದ್ದಾರೆ. ವಿಕಲಚೇತನರ ಜೀವನೋಪಾಯ ಕಾರ್ಯಕ್ಕಾಗಿ ಹೆಲೆನ್ ಕೆಲರ್ ಪ್ರಶಸ್ತಿ ಪಡೆದಿರುವ ಸಂಜಿತ್ ಹೆಗ್ಡೆಯವರ ತಂದೆ ಗಣೇಶ್ ಹೆಗ್ಡೆ ತೀರ್ಪುಗಾರರಾಗಿದ್ದರು ಎಂದರು.ಸ್ಪರ್ಧಾ ವಿಜೇತರು:
ಸರ್ಕಾರಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಎಂ.ಲಾವಣ್ಯ -ಪ್ರಥಮ, ದೇವಲ ಮಹರ್ಷಿ ಪ್ರೌಢಶಾಲೆಯ ಜಿ.ಮಧು-ದ್ಜಿತೀಯ, ರಕ್ಷಿತಾ, ಜಿ.ಜ್ಯೋತಿ ಹಾಗೂ ಸಿ. ಹೇಮಲತಾ ಬಹುಮಾನ ಪಡೆದರು. ಪೊಲೀಸ್ ಇಲಾಖೆಯ ಎ.ಎಸ್.ಐ. ಮಲ್ಲಿಕಾರ್ಜುನ ಹಾಗೂ ಜಾಕಿರ್ ಹುಸೇನ್ ಬಹುಮಾನಗಳನ್ನು ವಿತರಿಸಿದರು.ನಾಗದಳದ ಸದಸ್ಯರಾದ ಎ.ವಿ.ರಘು, ರಾಮಣ್ಣ, ಗಾನಗಾಂಧರ್ವ ಗಾಯನ ವೇದಿಕೆಯ ಕೆ.ನಂಜುಂಡಮೂರ್ತಿ, ಎನ್.ಮನೋಜ್, ತನುಜಾ, ವನಜಾ, ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಡಾ.ಬಿ.ಕೆ.ಅಶ್ವಿನಿ, ಅಂಬೇಡ್ಕರ್ ಬಾಲಕಿಯರ ವಸತಿನಿಲಯದ ಪಾಲಕಿ ರೂಬಿಯಾ ಉಪಸ್ಥಿತರಿದ್ದರು.
ಫೋಟೋ-1ಕೆಡಿಬಿಪಿ2- ದೊಡ್ಡಬಳ್ಳಾಪುರದ ನಾಗರಕೆರೆ ಏರಿಯಲ್ಲಿ ನಾಗದಳ ಮತ್ತು ಗಾನಗಂಧರ್ವ ಗಾಯನ ವೇದಿಕೆಯಿಂದ ಪ್ರೌಢಶಾಲಾ ಮಕ್ಕಳ ಜಿಲ್ಲಾಮಟ್ಟದ ಕನ್ನಡ ನಾಡು-ನುಡಿ ಗಾಯನ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.