ಹೊಸಪೇಟೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು, ತೆಗೆದುಹಾಕಲು ಹಾಗೂ ಪ್ರೊಜಿನಿ ಮ್ಯಾಪಿಂಗ್ ಮಾಡಲು ಜೂ.16ರವರೆಗೆ ಅವಕಾಶವಿದೆ. ಆ ಬಳಿಕ ಪೋರ್ಟಲ್ ಫ್ರೀಜ್ ಆಗಲಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ಯಾವುದೇ ಬದಲಾವಣೆಗಳಿಗೆ ಅವಕಾಶವಿಲ್ಲ ಎಂದರು.

ಮತಗಟ್ಟೆ ಅಧಿಕಾರಿಗಳಿಗೆ ಸಿದ್ಧತೆ, ತರಬೇತಿ ಮತ್ತು ಮುದ್ರಣವು ಜೂ.20ರಿಂದ 29ರವರೆಗೆ ನಡೆಯಲಿದೆ. ನಂತರ ಮತಗಟ್ಟೆ ಮಟ್ಟದ ಬಿಎಲ್‍ಒಗಳು ಮನೆ ಮನೆ ಭೇಟಿಯು ಜೂ.30ರಿಂದ ಜುಲೈ 29ರವರೆಗೆ ಪ್ರತಿ ಮನೆಗೆ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನಾ ಪಟ್ಟಿ ನೀಡಿ ಮತದಾರರಿಂದ ಸಹಿ ಪಡೆಯುವರು. ನಂತರ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರಂದು ಪ್ರಕಟಿಸಲಿದ್ದು, ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯನ್ನು ಅಕ್ಟೋಬರ್ 7 ರಂದು ಚುನಾವಣಾ ಆಯೋಗವು ಬಿಡುಗಡೆ ಮಾಡಲಿದೆ ಎಂದರು.

ಮತದಾರರ ನೋಂದಣಿ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ; ಸಾರ್ವಜನಿಕರು ಹಾಗೂ 18 ವರ್ಷ ತುಂಬಿದ ಯುವ ಮತದಾರರು ಹೆಸರು ಸೇರ್ಪಡೆಗಾಗಿ ಇನ್ನು ಮುಂದೆ ಭೌತಿಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಆಯಾ ಭಾಗದ ಬಿಎಲ್‍ಒಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ, ಆನ್‍ಲೈನ್ ಮೂಲಕವೇ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಮತ್ತು ಸಣ್ಣಪುಟ್ಟ ತಿದ್ದುಪಡಿಗಳಿಗೂ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.


ಎಸ್.ಐ.ಆರ್. ಪೂರ್ವ ಪ್ರೊಜಿನಿ ಮತ್ತು ಮ್ಯಾಪಿಂಗ್ ಪ್ರಗತಿ; ಜಿಲ್ಲೆಯಲ್ಲಿ ಪ್ರಸ್ತುತ ಪ್ರಿ​ಎಸ್‍ಐಆರ್ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಮ್ಯಾಪಿಂಗ್ ಪ್ರಗತಿ ಶೇ.75.78, ಪ್ರೊಜಿನಿ ಪ್ರಗತಿ ಶೇ.110.07, ಒಟ್ಟಾರೆ ಪ್ರಗತಿ ಮ್ಯಾಪಿಂಗ್ + ಪ್ರೊಜಿನಿ ಶೇ.92.59 ರಷ್ಟಾಗಿದೆ. ಕ್ಷೇತ್ರವಾರು ಮ್ಯಾಪಿಂಗ್ ವಿವರ ನೋಡುವುದಾದರೆ, ಹಡಗಲಿ ಶೇ 89.30, ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶೇ.91.05, ವಿಜಯನಗರ ಶೇ.98.58, ಕೂಡ್ಲಿಗಿ ಶೇ.95.70, ಹರಪನಹಳ್ಳಿ ಶೇ.87.58ರಷ್ಟು ಪ್ರಗತಿಯಾಗಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿನ ಐದು ವಿಧಾನಸಭಾ ಕ್ಷೇತ್ರಗಳಿಂದ 1234 ಮತಗಟ್ಟೆಗಳಿದ್ದು 565999 ಪುರುಷ, 576735 ಮಹಿಳಾ, 127 ಇತರೆ ಸೇರಿ 1142861 ಮತದಾರರಿದ್ದಾರೆ.

ರಾಜಕೀಯ ಪಕ್ಷಗಳ ಸಹಭಾಗಿತ್ವ:

ಈಗಾಗಲೇ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಸಭೆ ನಡೆಸಿ ಸೂಕ್ತ ಮಾಹಿತಿ ನೀಡಲಾಗಿದೆ. ಬಿಎಲ್‍ಒಗಳಿಗೆ ಸಹಕರಿಸಲು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ರಾಜಕೀಯ ಪಕ್ಷಗಳು ತಮ್ಮ ಬಿಎಲ್‍ಎ ಗಳನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಎಸ್.ಐ.ಆರ್. ಎಂದರೆ ಮತದಾರರ ಪಟ್ಟಿಯಿಂದ ಯಾರ ಹೆಸರನ್ನೂ ಕೈಬಿಡುವುದಿಲ್ಲ. ಸಾರ್ವಜನಿಕರು ಬಿಎಲ್‍ಒಗಳು ಮನೆಗೆ ಬಂದಾಗ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಒಂದು ವೇಳೆ ಹೆಸರು ಬಿಟ್ಟುಹೋಗಿದ್ದಲ್ಲಿ ಜನ್ಮ ದಿನಾಂಕ ದೃಢೀಕರಣ ಪತ್ರ, ಪಡಿತರ ಚೀಟಿ, ನರೇಗಾ ಕಾರ್ಡ್ ನೀಡಿ ಹೆಸರು ಸೇರಿಸಬಹುದು. ಆದರೆ ಆಧಾರ್ ಕಾರ್ಡ್ ಅನ್ನು ಕೇವಲ ಗುರುತಿನ ಚೀಟಿಯಾಗಿ ಮಾತ್ರ ಪರಿಗಣಿಸಲಾಗುವುದು, ವಾಸಸ್ಥಳದ ದಾಖಲೆಯಲ್ಲ ಎಂದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಉಪಸ್ಥಿತರಿದ್ದರು.