ಶಿಕ್ಷಣಕ್ಕಾಗಿ ಶಿರಸಂಗಿ ಲಿಂಗರಾಜ ಕೊಡುಗೆ ಅಪಾರ

| Published : Jan 29 2025, 01:35 AM IST

ಸಾರಾಂಶ

ಸರ್ವರೂ ಧರ್ಮವಂತರಾಗಬೇಕು ಎನ್ನುವುದು ಶಿರಸಂಗಿ ಲಿಂಗರಾಜರ ಆಶಯವಾಗಿತ್ತು

ಮುಂಡರಗಿ: ತ್ಯಾಗವೀರ ಶಿರಸಂಗಿ ಲಿಂಗರಾಜರು ವೀರಶೈವ-ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ತಾಲೂಕಿನ ಬರದೂರ ಗ್ರಾಮದ ಕಾಶಿಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ತ್ಯಾಗವೀರ ಸಿರಸಂಗಿ ಲಿಂಗರಾಜ ಸೇವಾ ಸಂಸ್ಥೆ ಹಾಗೂ ಶ್ರೀ ಲಿಂಗರಾಜ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಜರುಗಿದ ತ್ಯಾಗವೀರ ಶಿರಸಂಗಿ ಲಿಂಗರಾಜರ 164ನೇ ಜಯಂತ್ಯುತ್ಸವ ಹಾಗೂ ಶ್ರೀ ಸಿದ್ಧರಾಮೇಶ್ವರರ 853ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರ್ವರೂ ಧರ್ಮವಂತರಾಗಬೇಕು ಎನ್ನುವುದು ಶಿರಸಂಗಿ ಲಿಂಗರಾಜರ ಆಶಯವಾಗಿತ್ತು. ಹಾನಗಲ್ಲ ಶ್ರೀ ಗುರು ಕುಮಾರ ಶಿವಯೋಗಿಗಳ ಆಶಯದಂತೆ ಅಖಿಲ ಭಾರತ ವೀರಶೈವ ಮಹಾಸಭೆ ಪ್ರಥಮ ಅಧ್ಯಕ್ಷರಾಗಿ ವೀರಶೈವ ಸಮಾಜಕ್ಕೆ ಅಪಾರ ಕೊಡುಗೆ ನೀಡಿದರು. ವೀರಶೈವ-ಲಿಂಗಾಯತ ನಾವೇಲ್ಲರೂ ಒಂದೇ ಎನ್ನುವ ಭಾವ ಎಲ್ಲರಲ್ಲೂ ಮೂಡಿ ಬರಬೇಕು. ಇಷ್ಟಲಿಂಗ ಎಂದರೆ ಅನಿಷ್ಠ ಹೋಗಲಾಡಿಸುವದು. ಅದು ಅಂತರಂಗ ಚೈತನ್ಯವಿದ್ದಂತೆ ಸಂಕಷ್ಟ ದೂರ ಮಾಡುತ್ತದೆ. ಇಷ್ಟಲಿಂಗ ಪೂಜೆ ಮಾಡುವವರು ಜೀವನ ತತ್ವ ಅಳವಡಿಸಿಕೊಳ್ಳುತ್ತಾನೆ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಿಂಗರಾಜರನ್ನು ಒಂದು ಜಾತಿಗೆ ಸಿಮೀತಗೊಳಿಸಬಾರದು. ಸರ್ವ ಧರ್ಮದವರು ಸೇರಿ ಜಯಂತಿ ಆಚರಿಸಬೇಕು. ಮಹಿಳೆ-ಪುರುಷ ಎಂಬ ತಾರತಮ್ಯ ಹೋಗಬೇಕು. ಮಹಿಳೆಯರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂಬ ಉತ್ತಮ ವಿಚಾರ ಲಿಂಗರಾಜರು ಹೊಂದಿದ್ದರು. ಅವರ ವಿಚಾರ ಪ್ರಸ್ತುತ ಸಮಾಜಕ್ಕೆ ಅನ್ವಯವಾಗುತ್ತದೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿಸಮಿತಿ ಸದಸ್ಯ ನಾಡೋಜ ಡಾ. ಮನು ಬಳಿಗಾರ ಮಾತನಾಡಿ, ಸಿರಸಂಗಿ ಲಿಂಗರಾಜರ ವಿಚಾರಧಾರೆ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಡೀ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅದರ ಮಹತ್ವ ಅರಿತು ಜೀವನ ನಡೆಸಬೇಕು ಎಂದರು. ಸಂಸ್ಥೆ ಗೌರವಾಧ್ಯಕ್ಷ ಈರಪ್ಪ ಬಿಸನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಮಿಥುನಗೌಡ ಪಾಟೀಲ, ಕೆಜಿಕೆ ಸ್ವಾಮಿ ಮಾತನಾಡಿದರು. ಬಿ.ಬಿ. ಪಾಟೀಲ, ಕೆ.ಎ. ದೇಸಾಯಿ, ಬಸವರಾಜ ಸಂಗನಾಳ, ಡಾ. ಪಿ.ಬಿ.ಹಿರೇಗೌಡರ, ಈರಣ್ಣ ನಾಡಗೌಡ್ರ, ಗೌರಿಪುರ ಸೇರಿದಂತೆ ಬರದೂರ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರೊ. ಎಂ.ಜಿ. ಗಚ್ಚಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಈಶ್ವರಗೌಡ ಹಿರೇಗೌಡ್ರ ಸ್ವಾಗತಿಸಿದರು. ಶಿಕ್ಷಕ ಎಸ್.ಬಿ. ಗದಗ ನಿರೂಪಿಸಿದರು. ಈಶಪ್ಪ ಶಿರೂರು ವಂದಿಸಿದರು.