ಬೆಳ್ತಂಗಡಿಯ ರೆಂಕೆದಗುತ್ತು ಬಳಿ ಇರುವ‌ ಸಿರಿ ನ್ಯೂ ಇಂಡಸ್ಟಿಯಲ್ ಪಾರ್ಕ್ ನಲ್ಲಿ ಸಿರಿ ಹಬ್ಬದ ಪ್ರಯುಕ್ತ ನಡೆದ ಸಿರಿ ಸಿಬ್ಬಂದಿಗಳ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ

ಬೆಳ್ತಂಗಡಿ: ಸಿರಿ ಸಿಬ್ಬಂದಿ ತಯಾರಿಸಿದ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಮಾರುಕಟ್ಟೆ ತಲುಪಿವೆ ಎಂದರೆ ನಮ್ಮ ತಾಲೂಕಿನ ಜನತೆಗೆ ಹೆಮ್ಮೆ. ತಾಲೂಕಿನವರೇ ತಯಾರಿಸಿದ ಉತ್ಪನ್ನ ಸಿರಿ ಕಲ್ಪನೆಯ ರೂವಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆಯವರು ಒಂದು ಸಂಸ್ಥೆಯನ್ನು ಲಾಭದ ಉದ್ದೇಶಕ್ಕಾಗಿಯೇ ಮಾಡದೆ ಅಲ್ಲಿನ ಸಿಬ್ಬಂದಿ ಭವಿಷ್ಯವನ್ನು ರೂಪಿಸುವ ಸಂಸ್ಥೆಯಾಗಿಸಿರುತ್ತಾರೆ. ಸಿರಿ ಸಿಬ್ಬಂದಿಗಳ ನಯ ವಿನಯ, ತಮ್ಮದೇ ಸಿರಿ ಎಂಭ ಭಾವನೆಯಿಂದ ದುಡಿಯುವ ರೀತಿ ನೋಡಿದರೆ ಸಿರಿ ಸಂಸ್ಥೆಯಲ್ಲ ಸಿರಿ ಕೂಡು ಕುಟುಂಬದ ಮನೆಯಂತೆ ಎಂದು ಶಾಸಕ ಹರೀಶ್ ಪೂಂಜಾ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಬೆಳ್ತಂಗಡಿಯ ರೆಂಕೆದಗುತ್ತು ಬಳಿ ಇರುವ‌ ಸಿರಿ ನ್ಯೂ ಇಂಡಸ್ಟಿಯಲ್ ಪಾರ್ಕ್ ನಲ್ಲಿ ಸಿರಿ ಹಬ್ಬದ ಪ್ರಯುಕ್ತ ನಡೆದ ಸಿರಿ ಸಿಬ್ಬಂದಿಗಳ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಸಿರಿ ಸಂಸ್ಥೆಯು ಒಂದು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದೆ ಎಂದರೆ ಒಂದು ಸಾವಿರ ಕುಟುಂಬಕ್ಕೆ ಬೆಳಕು ಬಂದಿದೆ ಎಂದರ್ಥ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ನೀಡಲು ಡಾ. ಹೆಗ್ಗಡೆಯವರು ಚಿಂತಿಸಿದ್ದು, ಈ ಕ್ಷೇತ್ರದ ಶಾಸಕನಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ವಿಶ್ವನಾಥ್ ಮಾತನಾಡಿ, ಶ್ರಿ ಕ್ಷೇತ್ರ ದರ್ಮಸ್ಥಳ ಚತುರ್ದಾನ ಪರಂಪರೆಯ ಅನ್ನದಾನ, ಅಭಯದಾನ, ಆರೋಗ್ಯ ದಾನ, ಶಿಕ್ಷಣ ದಾನದ ಜೊತೆಗೆ ಲಕ್ಷಾಂತರ ಉದ್ಯೋಗ ನೀಡಿದ ಕಾರಣ ಉದ್ಯೋಗ ದಾನ ನೀಡಿದ ಕ್ಷೇತ್ರವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ಜನಾರ್ದನ್ ಮಾತನಾಡಿ, ಡಾ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ ಸಿರಿ ಸಂಸ್ಥೆಯನ್ನು ಪ್ರೀತಿಯ ಸಂಸ್ಥೆಯಾಗಿ ಪ್ರಾರಂಬಿಸಿದ್ದು, ಸಾವಿರಾರು ಮಂದಿಗೆ ಉದ್ಯೋಗ ನೀಡಬೇಕು ಎಂದು ಕನಸು ಕಂಡಿದ್ದಾರೆ. ಈಗ ಇರುವ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮದಿಂದ ಸಂಸ್ಥೆ ಬೆಳೆದಿದೆ ಎಂದರು.

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕರಾಮ್, ಖ್ಯಾತ ಸೌಂದರ್ಯ ತಜ್ನೆ ಉಮಾ ಜಯಕುಮಾರ್, ಸಿರಿ ಕ್ಲಬ್ ಅದ್ಯಕ್ಷೆ ಉಷಾ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯಲ್ಲಿ ಆರಂಭದಿಂದ ಇದ್ದ ಸಿಬ್ಬಂದಿ, ಸಿರಿ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.

ಸಿರಿ ಸಂಸ್ಥೆಯ ಮುಖ್ಯ ನಿರ್ವಹಣಾಧಿಕಾರಿ ಪ್ರಸನ್ನ ಸ್ವಾಗತಿಸಿ, ಗೋದಾಮು ವಿಭಾಗದ ಮುಖ್ಯಸ್ಥ ಜೀವನ್ ಕಾರ್ಯಕ್ರಮ ನಿರೂಪಿಸಿದರು.